ಸಾರಾಂಶ
ಶಿರಹಟ್ಟಿ: ಮಕ್ಕಳು ದೈಹಿಕವಾಗಿಯಷ್ಟೇ ಅಲ್ಲದೇ ಮಾನಸಿಕವಾಗಿಯೂ ಸದೃಢರಾಗಿರಬೇಕು. ಈ ದಿಸೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಅವರ ಚಟುವಟಿಕೆಗಳನ್ನು ಗಮನಿಸಿ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಿ ಓದಿಗೆ ಎಲ್ಲರೂ ಸಹಕರಿಸಬೇಕು ಎಂದು ಪಪಂ ಮಾಜಿ ಅಧ್ಯಕ್ಷ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಕರೆ ನೀಡಿದರು.
ಪಟ್ಟಣದ ಸಿಸಿಎನ್ ಸರಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಇಡ್ಲಿ, ಸಾಂಬಾರ ವಿತರಿಸಿ ಮಕ್ಕಳೊಂದಿಗೆ ತಾವೂ ಸೇವನೆ ಮಾಡಿ ಮಾತನಾಡಿದರು. ಚಿಕ್ಕ ಚಿಕ್ಕ ಮಕ್ಕಳೇ ಇರಲಿ, ಪ್ರಾಥಮಿಕ, ಪೌಢ ಶಾಲೆಗಳಲ್ಲಿ ಓದುವ ಮಕ್ಕಳೇ ಇರಲಿ, ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಲು ಅವರಿಗೆ ಪೌಷ್ಟಿಕ ಆಹಾರ ನೀಡಿ ಸದೃಢ ಪ್ರಜೆಗಳನ್ನಾಗಿ ರೂಪಿಸಬೇಕೆಂದರು.ಇಂದಿನ ಮಕ್ಕಳು ನಾಳಿನ ಪ್ರಜೆಗಳಾಗುವುದರಿಂದ ಅವರನ್ನು ಸದೃಢ ಪ್ರಜೆಗಳನ್ನಾಗಿಸಬೇಕು. ಸದೃಢ ಪ್ರಜೆಗಳಿಂದ ಮಾತ್ರ ದೇಶ ಸುಭಿಕ್ಷವಾಗಲು ಸಾಧ್ಯ. ಯಾವುದೇ ಮಗು ಹಸಿವು, ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಬೇಕು. ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳನ್ನು ಸದೃಢರನ್ನಾಗಿ ಮಾಡಲು ಏನೇನು ಆಹಾರ ಕೊಡಬೇಕೆಂಬ ಬಗ್ಗೆ ಶಾಲಾ ಸಿಬ್ಬಂದಿ, ಎಸ್‌ಡಿಎಂಸಿ ಜವಾಬ್ದಾರಿ ವಹಿಸಬೇಕೆಂದರು.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರೆ ಹೆಚ್ಚಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ನೀಡಿ ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.ಸಿಸಿಎನ್ ಸರಕಾರಿ ಪ್ರೌಢ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕನುಗುಣವಾಗಿ ಶಾಲಾ ಕೊಠಡಿ, ಆಟದ ಮೈದಾನ, ಗ್ರಂಥಾಲಯ ಅಗತ್ಯವಿದ್ದು, ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಶಾಲೆ ವತಿಯಿಂದ ಲಿಖಿತ ಮನವಿ ಪತ್ರ ಕೂಡ ನೀಡಲಾಗಿದೆ. ಆದಷ್ಟು ಬೇಗ ಅನುದಾನ ಮಂಜೂರ ಮಾಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸಬೆಕು ಎಂದು ವಿನಂತಿಸಿದರು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಚ್. ಓಲೇಕಾರ, ಅಕ್ಷರ ದಾಸೋಹ ಅಧಿಕಾರಿ ರಾಮನಗೌಡ್ರ ಎಸ್, ಮಾತನಾಡಿದರು. ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಎಚ್.ಎಂ. ದೇವಗೀರಿ, ಮಹೇಶ ಕಲ್ಲಪ್ಪನವರ, ನಂದಾ ಪಲ್ಲೇದ, ಮುಖ್ಯ ಶಿಕ್ಷಕ ಜಿ.ಡಿ. ಈರಕ್ಕನವರ ಹಾಗೂ ಶಾಲಾ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.