ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮಾಜಿ ಶಾಸಕ ಶರಣಪ್ಪ ಸುಣಗಾರ ಅವರಿಗೆ ಎಂಎಲ್ಸಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಗುಡಿಮನಿ ಅವರು ಮಾತನಾಡಿ, ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ, ಶಾಸಕರಾಗಿ ಅವರು ಕೈಗೊಂಡ ಕಾರ್ಯಗಳು ಜನಮಾನಸದಲ್ಲಿವೆ. ಪಕ್ಷಕ್ಕೆ ಅವರ ಕೊಡುಗೆ ಅಪಾರ. ಜಿಲ್ಲಾ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ ಎಂದರು.ಸೋಲು-ಗೆಲುವು ಎರಡನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿದ್ದಾರೆ. ನಿರಂತರವಾಗಿ ಪಕ್ಷಕ್ಕೆ ನಿಷ್ಠೆಯಿಂದ ಜಿಲ್ಲಾಧ್ಯಕ್ಷರಾಗಿ ಹಾಗೂ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಬಾರಿ ದೇವರಹಿಪ್ಪರಗಿ ಮತಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದ್ದರೂ ಮುಖಂಡರ ಕಾರ್ಯಕರ್ತರ ಜೊತೆ ನಿರಂತರ ಪಕ್ಷ ಸಂಘಟನೆ ಮಾಡಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಪರಶುರಾಮ ದಿಂಡವಾರ, ನಜೀರ್ ಬೀಳಗಿ,ಮುಖಂಡೆ ಸುನಂದಾ ಸೋನ್ನಹಳ್ಳಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಸುಣಗಾರ ಅವರ ಕೊಡುಗೆ ಅಪಾರವಾಗಿದೆ. ಅಹಿಂದ ನಾಯಕರಾಗಿ, ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಮುಖಂಡರ ಗೆಲುವಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಕಾರ್ಯಕರ್ತರ ಜೊತೆ ಸೇರಿ ಪಕ್ಷದ ಸಂಘಟನೆಗಾಗಿ ಅವರನ್ನು ಎಂಎಲ್ಸಿ ಮಾಡಿದರೆ ಉತ್ತರ ಕರ್ನಾಟಕದಲ್ಲಿ ಅಹಿಂದ ವರ್ಗದವರಿಗೆ ಸ್ಥಾನ ನೀಡಿದಂತಾಗುತ್ತದೆ ಎಂದರು.ಈ ವೇಳೆ ಪ.ಪಂ ನಾಮನಿರ್ದೇಶನ ಸದಸ್ಯರುಗಳಾದ ರಾಜು ಮೆಟಗಾರ, ಹುಸೇನ್ ಕೊಕಟನೂರ, ಸುನೀಲ ಕನಮಡಿ, ಮುಖಂಡರುಗಳಾದ ಸೈಯದ್ ರೋಗಿ, ಭೀರು ಹಳ್ಳಿ, ನಜೀರ್ ಬೀಳಗಿ, ಬಾಷಾಸಾಬ್ ಹಳ್ಳಿ, ರಹಿಮಾನ್ ಕನಕಾಲ್, ಶಾಕೀರಾ ಹೆಬ್ಬಾಳ, ಮಹೇಶ್ ಮುರಾಳ, ರಾವತ್ ಮಾಸ್ತಾರ ತಳಕೇರಿ, ಮಹಮ್ಮದ್ ರಫೀಕ್ ಮೋಮಿನ, ಮಲ್ಲು ಕುಂಬಾರ, ಬಸವರಾಜ ಇಂಗಳಗಿ, ಮಡಿವಾಳ ಹಡಪದ, ಖಾಜೆಸಾಬ್ ಕೆಂಗನಾಳ, ಜಾಹೇದಾ ಕೊರಬೂ, ಸಾಹೇಬಿ ತಾಂಬೋಳಿ, ಮಕ್ತುಂಬಿ ಶೇಖ್ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.