ಕುಷ್ಟಗಿ: ಭೂಮಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಸಭೆ ಸಮಾರಂಭದಲ್ಲಿ ವಸ್ತುಗಳ ಬದಲು ಗಿಡಗಳನ್ನು ಉಡುಗೋರೆಯಾಗಿ ನೀಡುವ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಹೇಳಿದರು.

ತಾಲೂಕಿನ ಗುಡಿಕಲಕೇರಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯಕ್ಷೇತ್ರದಲ್ಲಿ ತಾಲೂಕು ಕಾನೂನೂ ಸೇವಾ ಸಮಿತಿ, ಅರಣ್ಯ ಇಲಾಖೆಯ ನೇತೃತ್ವದಲ್ಲಿ ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭೂಮಿಯ ಮೇಲೆ ಗಿಡಮರ ಬೆಳೆಸದ ಪರಿಣಾಮ ಇಂದು ನಾವು ಎಸಿ, ಫ್ಯಾನ್ ಇಲ್ಲದೆ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.

ಸೌರಮಂಡಲದಲ್ಲಿ ಭೂಮಿ ವಿಶೇಷ ಗ್ರಹವಾಗಿದ್ದು, ಇಲ್ಲಿ ಜೀವಿಸುವ ಪ್ರತಿಯೊಬ್ಬರು ಭೂಮಿಯ ರಕ್ಷಣೆ ಮಾಡಬೇಕಿದೆ. ನಮ್ಮ ಜಮಿನೀನಲ್ಲಿರುವ ಮಣ್ಣನ್ನು ಹರಿದು ಹೋಗದಂತೆ ನೋಡಿಕೊಳ್ಳಬೇಕು ಸರಿಯಾದ ಒಡ್ದು ನಿರ್ಮಾಣ ಮಾಡಬೇಕು, ಜಮೀನಿನಲ್ಲಿ ಗಿಡಗಳನ್ನು ನೆಡಬೇಕು ಎಂದರು.

ಅಭಿವೃದ್ಧಿ ನೆಪದಲ್ಲಿ ಕಟ್ಟಡ ನಿರ್ಮಾಣಕ್ಕೆ ದೊಡ್ಡ ದೊಡ್ಡ ಮರ ನಾಶ ಮಾಡುತ್ತಿದ್ದು, ಅರಣ್ಯ ಭೂಮಿ ಒತ್ತುವರಿಯಾಗುತ್ತಿದ್ದು, ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದರು.


ಇಂದಿನ ದಿನಗಳಲ್ಲಿ ದುಡ್ಡು ಕೊಟ್ಟು ನೀರು ಪಡೆಯಬೇಕಿದ್ದು, ಮುಂದಿನ ದಿನಗಳಲ್ಲಿ ಮನೆಯ ಮುಂದೆ ಇರುವ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಲು ಮುಂದಾಗಬೇಕು, ನೀರು ಪೋಲಾಗದಂತೆ ನೋಡಿಕೊಳ್ಳಬೇಕು ನೀರನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದರು.

ಇಂದಿರಾ ಸುಹಾಸಿನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮರಳು ಸಾಗಾಣಿಕೆ. ಮೈನಿಂಗ್ ಕಾರ್ಯ ನಡೆಯುತ್ತಿದ್ದರ ಪರಿಣಾಮ ಭೂಮಿ ಬರಿದಾಗುತ್ತಿದ್ದು, ಜಲ ಮಾಲಿನ್ಯ ವಾಯು ಮಾಲಿನ್ಯ ತಡೆಗಟ್ಟುವ ಕಾರ್ಯ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಹೊಗೆ ರಹಿತ ವಾಹನ ಬಳಕೆ ಮಾಡುವ ಮೂಲ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದರು.

ಸಾಮಾಜಿಕ ವಲಯ ಅರಣ್ಯಾಧಿಕಾರಿ ಹನಮಂತಪ್ಪ ಮಾತನಾಡಿ, ಭೂಮಿ ತಾಯಿಗೆ ಸಮಾನವಾಗಿದ್ದು, ತಾಯಿಯಷ್ಟೇ ಭೂಮಿಯನ್ನು ಜೋಪಾನ ಮಾಡಬೇಕು ಭೂಮಿಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು. ಗಿಡ ನೆಡುವ ಮೂಲಕ ಉತ್ತಮ ಪರಿಸರ ಕಾಪಾಡಬೇಕು ಭೂಮಿ ಮಾನವ ಬದುಕಿನ ಆಧಾರವಾಗಿದ್ದು ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಆರ್‌ಎಫ್‌ಓ ಅಬ್ದುಲ್‌ , ಅರಣ್ಯ ರಕ್ಷಕ ಮಹಾಂತೇಶ ರೆಡ್ಡಿ, ಗಸ್ತು ಪಾಲಕ ವಿನಯ್, ನ್ಯಾಯಾಂಗ ಇಲಾಖೆಯ ಸುನೀಲ ಮಠದ, ಆಕಾಶ ಸಂಗನಾಳ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಸಿ ನೆಡಲಾಯಿತು.