ಹಿಂದುಳಿದ ವರ್ಗದವರಿಗೆ ರಾಜಕೀಯ ಸ್ಥಾನ ಕಲ್ಪಿಸಿ

| Published : Aug 30 2024, 01:15 AM IST

ಸಾರಾಂಶ

ನಗರದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಬುಧವಾರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ತುಮಕೂರು: ನಗರದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಬುಧವಾರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಶ್ರೀಕೃಷ್ಣ ಈ ದೇಶದ ಎಲ್ಲಾ ಜಾತಿ ಸಮುದಾಯದವರು ಆರಾಧಿಸುವ ದೇವರು. ಶ್ರೀಕೃಷ್ಣ ಒಂದು ಜಾತಿಗೆ ಸೀಮಿತವಲ್ಲ. ಕೃಷ್ಣನದ್ದು ಸಾಂಸ್ಕೃತಿಕ ವ್ಯಕ್ತಿತ್ವ ಎಲ್ಲಾ ಜಾತಿ, ಧರ್ಮದವರು ತಮ್ಮ ಮಕ್ಕಳಿಗೆ ಬಾಲಕೃಷ್ಣನ ವೇಷ ಹಾಕಿ ಆನಂದಿಸುತ್ತಾರೆ ಎಂದರು.ನಗರದ ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಅರಸು ಹೆಸರಿನ ಗ್ರಂಥಾಲಯ ಸ್ಥಾಪನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅರಸು ಅವರು ಈ ನಾಡಿನ ಶೋಷಿತ ಜನರ ಧ್ವನಿಯಾಗಿದ್ದಾರೆ. ಸರ್ಕಾರ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ ಹೆಚ್ಚಿನ ಅನುದಾನ ಕೊಡಬೇಕು. ಹಿಂದುಳಿದ ವರ್ಗದ ಮುಖಂಡರಿಗೆ ರಾಜಕೀಯ ಸ್ಥಾನಮಾನ ನೀಡಬೇಕು. ಜಿಲ್ಲೆಯ ಈ ವರ್ಗದವರಿಗೆ ನಿಗಮ, ಮಂಡಳಿಗಳಲ್ಲಿ ಸ್ಥಾನ ನಿಡಬೇಕು ಎಂದು ಮನವಿ ಮಾಡಿದರು.ಪ್ರವಚನಾಕಾರ ಟಿ.ಮುರಳಿಕೃಷ್ಣಪ್ಪ ಮಾತನಾಡಿ, ಅಧರ್ಮ ನಿರ್ಮೂಲನೆಗೆ, ಧರ್ಮ ಸ್ಥಾಪನೆಗೆ, ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶ್ರೀ ಕೃಷ್ಣ ಅವತಾರ ಎತ್ತಿ ಬಂದಿದ್ದ. ಶ್ರೀ ಕೃಷ್ಣನ ದಿವ್ಯ ವ್ಯಕ್ತಿತ್ವ, ಬೋಧಿಸಿದ ಭಗವದ್ಗೀತೆ ಸಮಾಜ ಸರಿಯಾದ ಮಾರ್ಗದಲ್ಲಿ ನಡೆಯಲು ಮಾರ್ಗಸೂಚಿಯಾಗಿದೆ ಎಂದರು.ಪತ್ರಕರ್ತ ಹರೀಶ್ ಆಚಾರ್ಯ ಮಾತನಾಡಿ, ಶ್ರೀ ಕೃಷ್ಣ ತನ್ನ ಗೀತೋಪದೇಶದಲ್ಲಿ ಅಧರ್ಮದ ವಿರುದ್ಧ ಯಾವತ್ತೂ ಧರ್ಮ ಜಯಗಳಿಸುತ್ತದೆ ಎಂಬ ಸಂದೇಶ ಕೊಟ್ಟಿದ್ದಾನೆ. ಈ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರಾದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷರಾದ ಡಿ.ಎಂ.ಸತೀಶ್, ಶಾಂತಕುಮಾರ್, ಮುಖಂಡರಾದ ವೆಂಕಟಸ್ವಾಮಿ, ಒಲಿಂಪಿಕ್ ಮಂಜೇಶ್, ಗುರುರಾಘವೇಂದ್ರ ಮೊದಲಾದವರು ಭಾಗವಹಿಸಿದ್ದರು.