ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಶಿಕ್ಷಣದಿಂದ ಮಹಿಳೆಯರ ಸಬಲೀಕರಣ ಸಾಧ್ಯ. ಹಾಗಾಗೀ ಹೆಣ್ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಗಂಡು ಮಗುವಿಗೆ ಶಿಕ್ಷಣ ನೀಡಿದರೆ ಕೇವಲ ಆತ ಮಾತ್ರ ಶಿಕ್ಷಣವಂತನಾಗುತ್ತಾನೆ. ಆದೇ ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಎಂದು ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿಮ್ಮಣ್ಮ ಅರಳಿಕಟ್ಟಿ ಹೇಳಿದರು.ಬಾಗಲಕೋಟ ಬಿವಿವಿ ಸಂಘದ ನಗರದ ಶ್ರೀ ಎಸ್.ಆರ್.ಕಂಠಿ ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ, ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಅವರು ಮಾತನಾಡಿ, ಮಹಿಳೆಯರು ಎಲ್ಲ ರಂಗಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ನಿಲ್ಲಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯವಿದೆ ಎಂದರು.
ಇಂದಿನ ವಿದ್ಯಾರ್ಥಿನಿಯರು ತಮಗೆ ಸಿಕ್ಕ ಅವಕಾಶಗಳನ್ನು ಹಿಂಜರಿಯದೆ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಸನ್ಮಾರ್ಗದ ಬದುಕು ರೂಪಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಜಗತ್ತು ಎಷ್ಟೇ ಆಧುನಿಕವಾಗಿ ಮುಂದುವರೆದರೂ ಅದರೊಂದಿಗೆ ದಾಪುಗಾಲು ಹಾಕುವ ನಾವುಗಳು ನಮ್ಮ ದೇಶದ ಸಂಸ್ಕೃತಿ, ಸನ್ನಡತೆ ಮರೆಯಬಾರದು. ಗುರುಹಿರಿಯರೊಂದಿಗೆ ಗೌರವದಿಂದ ನಡೆದುಕೊಂಡು ಪ್ರತಿಭಾ ಸಂಪನ್ನರಾಗಿ ನಾಡಿನ, ದೇಶದ ಸತ್ಪ್ರಜೆಗಳಾಗಿ ಬಾಳಬೇಕೆಂದು ಹೇಳಿದರು.ಇನ್ನೊರ್ವ ಅತಿಥಿ ಮುಧೋಳ ಪಿಸಿಎಸ್ ಅಜೀತಕುಮಾರ ಹೊಸಮನಿ ಮಾತನಾಡಿ, ಇಂದಿನ ಯುವ ಜನಾಂಗವು ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡು ಹದಿಹರೆಯದ ವಯಸ್ಸಿನಲ್ಲಿ ಅಪರಾಧಿಗಳಾಗುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ಉನ್ನತ ಕನಸು ಕಟ್ಟಿಕೊಂಡು ಶಿಕ್ಷಣ ಕಲಿಸಲು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ಕಳಿಸುತ್ತಿದ್ದಾರೆ. ಅವರ ಕನಸುಗಳಿಗೆ ನಿರಾಸೆಗೊಳಿಸದೆ ಶ್ರಮಪಟ್ಟು ವಿದ್ಯಾಭ್ಯಾಸ ನಡೆಸಿ ನಾಡಿಗೆ, ದೇಶಕ್ಕೆ ಕೀರ್ತಿ ಬೆಳಗಿಸಬೇಕು. ಪದವಿ ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ಬೆಳಸಿ ಕೊಳ್ಳಬೇಕೆಂದರು.
ಪ್ರಾಚಾರ್ಯ ಪ್ರೊ.ಎಂ.ವ್ಹಿ.ಜಿಗಬಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಿದಷ್ಟೇ, ಕ್ರೀಡಾ ಮತ್ತು ಕಲೆ, ಸಂಸ್ಕೃತಿ ಕ್ಷೇತ್ರ ಅಭಿವೃದ್ಧಿ ಸಾಧಿಸುತ್ತದೆ. ಈ ಎರಡು ಕ್ಷೇತ್ರಗಳು ಬೆಳವಣಿಗೆ ಆಗಬೇಕಾದರೆ ಕಾಲೇಜುಗಳಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಪೋಷಕರು ಕೇವಲ ಪಠ್ಯ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳ ಕಾಲೇಜುಗಳಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಕಲೆ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿ ಕಾರ್ಯಾಧ್ಯಕ್ಷ ಡಾ.ಪ್ರಹ್ಲಾದ ಕೆ. ಸ್ವಾಗತಿಸಿ, ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ಕಾರ್ಯಾಧ್ಯಕ್ಷೆ ಪ್ರೊ.ಪ್ರೀತಿ ಕರಡಿ ಮತ್ತು ಪ್ರೊ.ಕವಿತಾ ಶಿವಪ್ಪಯ್ಯನಮಠ ವಾರ್ಷಿಕ ವರದಿ ವಾಚನ ಮಾಡಿದರು, ಪ್ರೊ.ಪಿ.ಡಿ.ಕುಂಬಾರ ಅತಿಥಿಗಳ ಪರಿಚಯ ಮಾಡಿದರು. ಐಕ್ಯೂಎಸಿ ಸಂಯೋಜಕ ಪ್ರೊ.ಎ.ಆರ್.ಕಡೂರ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎ.ವೈ.ಮುನ್ನೊಳ್ಳಿ, ವಿದ್ಯಾರ್ಥಿ ಪ್ರತಿನಿಧಿ ರಾಧಿಕಾ ಮಠಪತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಅತಿಥಿಗಳನ್ನು, ಕೆ.ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರೊ.ಎ.ಹೆಚ್.ಹಿರೇಮಠ ಮತ್ತು ಜಿ.ಪಿ.ಕೋಟೂರರನ್ನು ಸನ್ಮಾನಿಸಲಾಯಿತು. ಡಾ. ರವೀಂದ್ರ ಕತ್ತಿ ನಿರೂಪಿಸಿ, ಡಾ.ಲೋಕೇಶ ರಾಠೋಡ ವಂದಿಸಿ, ಭಾಗ್ಯಾ ಚಿನಿವಾಲ ಪ್ರಾರ್ಥಿಸಿದರು.