ಸಾರಾಂಶ
ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಹಾಕುವುದು ಸೇರಿದಂತೆ ಹಳೆ ಪದ್ದತಿ ರೂಢಿಸಿಕೊಳ್ಳಿ.
ಹರಪನಹಳ್ಳಿ: ರಾಸಾಯನಿಕ ಬಿಟ್ಟು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ರೈತರಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸಲಹೆ ನೀಡಿದರು.
ಅವರು ಪಟ್ಟಣದ ತಾಪಂ ಆವರಣದಲ್ಲಿರುವ ಸಾಮರ್ಥ್ಯಸೌಧದಲ್ಲಿ ಸೋಮವಾರ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಹಾಕುವುದು ಸೇರಿದಂತೆ ಹಳೆ ಪದ್ದತಿ ರೂಢಿಸಿಕೊಳ್ಳಿ ಎಂದು ಹೇಳಿದರು.
ಈಚೆಗೆ ರೈತರ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದಾರೆ. ಆದರೆ ಹಳ್ಳಿಗಳನ್ನು ಮಾತ್ರ ಮರೆಯುತ್ತಿದ್ದಾರೆ ಎಂದು ಹೇಳಿದರು.ಎರಡು ಮಕ್ಕಳಿದ್ದರೆ ಒಬ್ಬ ಮಗನನ್ನು ರೈತರನ್ನಾಗಿ ಮಾಡಿ ಇನ್ನೊಬ್ಬ ಮಗನನ್ನು ಉದ್ಯೋಗಕ್ಕೆ ಕಳಿಸಿ ಎಂದು ತಿಳಿಸಿದರು. ರೈತ ವರನಿಗೆ ಹೆಣ್ಣು ಕೊಡಿ ಎಂದು ಇತರರಿಗೆ ಶಾಸಕರು ಈ ಸಂದರ್ಭದಲ್ಲಿ ಶಿಫಾರಸು ಮಾಡಿದರು.
ಸಹಾಯಕ ಕೃಷಿ ನಿರ್ದೆಶಕ ವಿ.ಸಿ. ಉಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧಕ ರೈತರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಅರ್ಹ ರೈತ ಫಲಾನುಭವಿಗಳಿಗೆ ಕೃಷಿ ಉಪಕರಣಗಳನ್ನು ಶಾಸಕರು ವಿತರಿಸಿದರು.
ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ, ತಹಶೀಲ್ದಾರ ಬಿ.ವಿ. ಗಿರೀಶಬಾಬು, ತಾಪಂ ಮಾಜಿ ಸದಸ್ಯರಾದ ಮೈದೂರು ರಾಮಣ್ಣ, ಹುಲ್ಲಿಕಟ್ಟಿ ಚಂದ್ರಪ್ಪ, ಕಂಚಿಕೇರಿ ಜಯಲಕ್ಷ್ಮಿ, ಪುರಸಭೆ ನಾಮನಿರ್ದೇಶಿತ ಸದಸ್ಯೆ ಸುಮಾ ಜಗದೀಶ, ತಾಪಂ ಮಾಜಿ ಅಧ್ಯಕ್ಷ ಕೆ.ಕುಬೇರಪ್ಪ, ನಾಗಲಿಂಗಯ್ಯ, ನಾಗರಾಜ ಸಕ್ರಿಗೌಡ, ಬಿ.ದೇವೇಂದ್ರಗೌಡ, ರೇಷ್ಮೆ ಇಲಾಖೆಯ ನಾಗರಾಜ ಇದ್ದರು.ಹರಪನಹಳ್ಳಿ ಪಟ್ಟಣದ ಸಾಮರ್ಥ್ಯಸೌಧದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಶಾಸಕಿ ಎಂ.ಪಿ. ಲತಾ ಉದ್ಘಾಟಿಸಿದರು.