ಹಾವೇರಿ: ತೆರಿಗೆ ವಸೂಲಿ ಹಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಸುತ್ತಿರುವ ಪೌರ ಕಾರ್ಮಿಕರ ವೇತನ ಪಾವತಿಗೆ ಮೊದಲ ಆದ್ಯತೆ ನೀಡಬೇಕು. ಜತೆಗೆ ಕರ ವಸೂಲಿಗೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗುತ್ತಲ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರ ವೇತನ ಬಾಕಿ ಕುರಿತು ಮಾಹಿತಿ ಪಡೆದ ಅವರು, ಪೌರಕಾರ್ಮಿಕರ ವೇತನ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರು, ವಿವಿಧ ಬ್ಯಾಂಕ್‌ಗಳಲ್ಲಿ ಗ್ಯಾರಂಟಿ, ನರೇಗಾ ಯೋಜನೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಯ ಹಣ ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಈಗಗಾಲೇ ಗುರಿ ಸಾಧಿಸಲಾಗಿದೆ ಎಂದು ಹಲವಾರು ಕಾರಣಗಳನ್ನು ನೀಡಿ, ಸಾಲ ಮಂಜೂರಾತಿ ಮಾಡುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಮಸ್ಯೆಯಾಗಿದೆ. ಬ್ಯಾಂಕಿಗೆ ಬರುವ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ರೀತಿ ಆಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.

ಸದಸ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ವಿವಿಧ ನಿಗಮಗಳ ಹಾಗೂ ಇಲಾಖೆಗಳ ಅಧಿಕಾರಿಗಳು ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸಾಲಕ್ಕೆ ವಿವಿಧ ಯೋಜನೆಗಳ ಹಣ ಜಮೆ ಮಾಡಿಕೊಳ್ಳದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಶಿವರಾಜ ಹರಿಜನ ಹಾಗೂ ಬಸವರಾಜ ಹೆಡಿಗ್ಗೊಂಡ ಮಾತನಾಡಿ, ಜೆ.ಜೆ.ಎಂ. ಕಾಮಗಾರಿ ಸರಿಯಾಗಿ ಅನುಷ್ಠಾನ ಮಾಡಿಲ್ಲ, ವಿವಿಧ ಗ್ರಾಮಗಳಲ್ಲಿ ನೀರು ಸಹ ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.


ವೈದ್ಯಕೀಯ ಕಾಲೇಜಿನಲ್ಲಿ ನಿಗದಿತ ಸಂಖ್ಯೆಗಿಂತ ಅಧಿಕ ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿಯ ಹಾಗೂ ಪ.ಪಂಗಡದ ಎಷ್ಟು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಹಾಗೂ ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ಪೈಕಿ ಎಷ್ಟು ಪರಿಶಿಷ್ಟ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ನೀಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡುವಂತೆ ಸಮಿತಿಯ ಅಧಿಕಾರೇತರ ನಾಮನಿರ್ದೇಶಿತರು ಸಭೆಯ ಗಮನಕ್ಕೆ ತಂದರು.

ರೋಸ್ಟರ್ ಅನುಸಾರ ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 465 ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ 24 ಅಂಗಡಿಗಳು ಪರಿಶಿಷ್ಟ ಜಾತಿ ಹಾಗೂ ಪ. ಪಂಗಡದವರಿಗೆ ಸೇರಿವೆ. ನಿಯಮಾನುಸಾರ 84 ಪರಿಶಿಷ್ಟ ಜಾತಿ ಹಾಗೂ ಪ. ಪಂಗಡದವರಿಗೆ ನೀಡಲಾಗುವುದು. 500 ಪಡಿತರ ಚೀಟಿಗಳಿಗೆ ಒಂದು ನ್ಯಾಯಬೆಲೆ ಅಂಗಡಿ ಇರಬೇಕು. ಹಾಗಾಗಿ ಬರುವ ದಿನಗಳಲ್ಲಿ ಹೆಚ್ಚಿನ ಪಡಿತರ ಚೀಟಿ ಹೊಂದಿರುವ ಗ್ರಾಮಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಆಹಾರ ನಾಗರಿಕರ ಸರಬರಾಜು ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಹೆಡಿಗ್ಗೊಂಡ, ಸಂಜಯಗಾಂಧಿ ಸಂಜೀವಣ್ಣನವರ, ಎನ್.ಎಂ. ಗಾಳೆಮ್ಮನವರ, ರಮೇಶ ಕೊರವರ ಅವರು ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಜಿಪಂ ಸಿಇಒ ದಲ್ಜಿಜ್‌ಕುಮಾರ, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಸರೋಜಾ ಕೂಡಲಮಠ ಇತರರು ಇದ್ದರು.