ಸಾರಾಂಶ
ಬೆಳಗಾವಿ ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಪ್ರತಿ ವರ್ಷ ಸಲಹೆ, ಸೂಚನೆ ಪಡೆಯಲಾಗುತ್ತದೆ. ಆದರೆ, ಸಾರ್ವಜನಿಕರ ಸೂಕ್ತ ಸಲಹೆಗಳನ್ನು ಪಾಲಿಕೆ ಬಜೆಟ್‌ನಲ್ಲಿ ಆದ್ಯತೆ ನೀಡುತ್ತಿಲ್ಲ. ಈ ಬಾರಿಯಾದರೂ ಸಾರ್ವಜನಿಕರ ಸೂಕ್ತ ಸಲಹೆಗಳಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಮಾಜಿ ಮೇಯರ್ ವಿಜಯ ಮೋರೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಪ್ರತಿ ವರ್ಷ ಸಲಹೆ, ಸೂಚನೆ ಪಡೆಯಲಾಗುತ್ತದೆ. ಆದರೆ, ಸಾರ್ವಜನಿಕರ ಸೂಕ್ತ ಸಲಹೆಗಳನ್ನು ಪಾಲಿಕೆ ಬಜೆಟ್‌ನಲ್ಲಿ ಆದ್ಯತೆ ನೀಡುತ್ತಿಲ್ಲ. ಈ ಬಾರಿಯಾದರೂ ಸಾರ್ವಜನಿಕರ ಸೂಕ್ತ ಸಲಹೆಗಳಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಮಾಜಿ ಮೇಯರ್ ವಿಜಯ ಮೋರೆ ಆಗ್ರಹಿಸಿದರು.ಬೆಳಗಾವಿ ಪಾಲಿಕೆಯ ಸಭಾಭವನದಲ್ಲಿ ಮೇಯರ್ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಲ್ಲಿ ಬೆಳಗಾವಿ ನಗರದ ಸಾರ್ವಜನಿಕರು ನೀಡಿದ ಬಜೆಟ್ ಸಲಹೆಗಳಲ್ಲಿ ಒಂದೂ ಈಡೇರಿಸಿಲ್ಲ. ಪಾಲಿಕೆ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ತಮಗೆ ಬೇಕಾದ ರೀತಿಯಲ್ಲಿ ಬಜೆಟ್ ಮಂಡಿಸಿ ಸರ್ಕಾರಕ್ಕೆ ಕಳುಹಿಸುತ್ತಾರೆ. ನಮಗೆ ಕರೆದು ಅವಮಾನ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಮಾತನಾಡಿ, ಪಾಲಿಕೆ ಆಡಳಿತ ಮಂಡಳಿಯಿಂದ ಬಜೆಟ್ ಪೂರ್ವಭಾವಿ ಸಭೆ ಕರೆಯಲಾಗಿದೆ. ಮಾಜಿ ಮೇಯರ್, ಮಾಜಿ ಸದಸ್ಯರು ಸೇರಿದಂತೆ ನಗರದ ಜನರಿಗೆ ಅಪಮಾನ ಮಾಡಿದ್ದು, ಪಾಲಿಕೆ ಅಧಿಕಾರಿಗಳು ಕ್ಷಮೆ ಕೊರಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಮಾತನಾಡಿ, ಪಾಲಿಕೆ ಬಜೆಟ್ ನಲ್ಲಿ ಪ.ಜಾತಿ, ಪ.ಪಂಗಡದ ಸಮಾಜಕ್ಕೆ ಬಜೆಟ್ ನಲ್ಲಿ ಅನುಕೂಲವಾಗಬೇಕು. ನಿರ್ಗತಿಕ ಬಡವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಟ್ಟರೆ ದಲಿತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದಿಂದ ದಲಿತರಿಗೆ 20,30 ಅನುಪಾತದಲ್ಲಿ ಪಾಲಿಕೆಯಿಂದ ಸಹಾಯಧನ ನೀಡಿ ಜಾಗ ಕೊಡಿಸಬೇಕು ಎಂದು ಹೇಳಿದರು.
ಪತ್ರಕರ್ತ ಮೆಹಬೂಬ್ ಮಕಾನಂದಾರ ಮಾತನಾಡಿ, ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಪಾಲಿಕೆಯಿಂದ ವರ್ಷಕ್ಕೆ ₹3 ಲಕ್ಷ ಆರೋಗ್ಯ ವಿಮೆ ಕೊಡುತ್ತಿದ್ದೀರಿ. ಅದನ್ನು ₹5 ಲಕ್ಷಕ್ಕೆ ಏರಿಸಬೇಕು. ಬೆಳಗಾವಿ ನಗರಕ್ಕೆ ನೀರು ಪೂರೈಕೆ ಮಾಡುವ ಹಿಡಕಲ್ ಜಲಾಶಯದ ನೀರನ್ನು ಧಾರವಾಡದ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯಲು ದೊಡ್ಡ ಪೈಪ್ ಲೈನ್ ಅಳವಡಿಸುತ್ತಿದ್ದಾರೆ. ಇದು ನೀರಿನ ಕರ ಆಕರಣೆಯಲ್ಲಿ ಪರಿಣಾಮ ಬಿರಲಿದೆ. ಈ ಕುರಿತು ಪಾಲಿಕೆ ವಿಶೇಷ ಸಭೆ ಕರೆದು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಧರ್ಮವೀರ ಸಂಭಾಜಿ ಪುತ್ಥಳಿ, ಶಿವಾಶಿ ಪುತ್ಥಳಿ ಅಭಿವೃದ್ಧಿ ಪಡಿಸಿದ ಹಾಗೆ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ವರ್ತುಳ ಅಭಿವೃದ್ಧಿ ಪಡಿಸಲು ಪಾಲಿಕೆಯ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟು ಸರ್ವ ಭಾಷಿಕ ಪಾಲಿಕೆ ಎಂಬ ಹೆಗ್ಗಳಿಕೆ ಪಡೆಯಬೇಕೆಂದರು.ದಲಿತ ಮುಖಂಡ ಮಲ್ಲೇಶ ಚೌಗುಲೆ ಮಾತನಾಡಿ, ನಗರದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಆದರೆ ಯಾರೂ ಪಾಲಿಕೆಗೆ ತೆರಿಗೆ ತುಂಬುತ್ತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿನ ಮಳಿಗೆಯಿಂದ ಸರಿಯಾಗಿ ತೆರಿಗೆ ಆಕರಣೆಯಾಗುತ್ತಿಲ್ಲ. ತೆರಿಗೆ ವಂಚನೆ ಮಾಡುವವರ ವಿರುದ್ಧ ಕ್ರಮ ಜರುಗಿಸಿ ತೆರಿಗೆ ಆಕರಣೆ ಮಾಡಿಕೊಳ್ಳಬೇಕೆಂದರು. ಉಪಮೇಯರ್ ಆನಂದ ಚವ್ಹಾಣ, ಪಾಲಿಕೆ ಆಯುಕ್ತೆ ಶುಭಾ ಬಿ, ಉಪ ಆಯುಕ್ತ ಉದಯ ಕುಮಾರ ತಳವಾರ ಮತ್ತಿರರು ಉಪಸ್ಥಿತರಿದ್ದರು.ಪಾಲಿಕೆಯ ಆದಾಯ ಸೋರಿಕೆ ಎಲ್ಲಿ ಆಗುತ್ತದೆ ಎನ್ನುವುದು ಅಧಿಕಾರಿಗಳಿಗೆ ಸರಿಯಾಗಿ ಗೊತ್ತಿದೆ. ಪಾಲಿಕೆಯ ವಾಣಿಜ್ಯ ಮಂಡಳಿಗಳ ಸಾಕಷ್ಟು ಅಂಗಡಿ ಇವೆ. ಅವುಗಳಿಂದ ತೆರಿಗೆ ಸಂಗ್ರಹ ಮಾಡಿ ಪಾಲಿಕೆ ಆದಾಯ ದ್ವಿಗುಣ ಮಾಡಿಕೊಳ್ಳಬಹುದು.- ದಿನೇಶ್ ನಾಶಿಪುಡಿ ನಾಮನಿರ್ದೇಶಿತ ಪಾಲಿಕೆ ಸದಸ್ಯ