ಸಾರಾಂಶ
ಹೊಸಕೋಟೆ: ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಗುತ್ತಿಗೆದಾರರಿಗೆ ತಿಳಿಸಿದರು.
ಹೊಸಕೋಟೆ: ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಗುತ್ತಿಗೆದಾರರಿಗೆ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಲಕ್ಕೊಂಡಹಳ್ಳಿಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಅನುದಾನದಲ್ಲಿ 10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಜನರ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದು, ಗುತ್ತಿಗೆದಾರರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಮುಂದೆ ನಿಂತು ಕಾಮಗಾರಿ ಮಾಡಿಸಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೆ ದೀರ್ಘ ಕಾಲ ಬಾಳಿಕೆಗೆ ಬರುವಂತಿರಬೇಕು. ಈ ನಿಟ್ಟಿನಲ್ಲಿ ಗುತ್ತಿಗೆದಾರರು ಸಾಕಷ್ಟು ಜಾಗೃತರಾಗಿ ಕೆಲಸ ಮಾಡಬೇಕು. ಗುಣಮಟ್ಟದಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಕಾಮಗಾರಿ ಕಳಪೆ ಆದರೆ ಬಿಲ್ ಮಾಡಲು ನಾನು ಬಿಡುವುದಿಲ್ಲ. ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಹಂತಹಂತವಾಗಿ ಚಾಲನೆ ನೀಡಲಾಗುವುದು ಎಂದು ಹೇಳಿದರು.ನುಡಿದಂತೆ ನಡೆದಿದ್ದೇವೆ:
ಕಾಂಗ್ರೆಸ್ ಸರ್ಕಾರ ಸಂಪೂರ್ಣ ಜನಪರವಾಗಿದ್ದು 5 ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಬಡ ಮಧ್ಯಮ ವರ್ಗದವರಿಗೆ ಅನುಕೂಲವಾಗಿದ್ದು, ಆರ್ಥಿಕ ಸುಧಾರಣೆಗೆ ಪೂರಕವಾಗಿದೆ ಎಂದು ಹೇಳಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಮಾತನಾಡಿ, ಅಭಿವೃದ್ಧಿಗೆ ಪೂರಕವಾಗಿ ಎಲ್ಲಾ ರೀತಿಯಲ್ಲೂ ಶಾಸಕರು ಸ್ಪಂದಿಸಲಿದ್ದು ಗ್ರಾಮಸ್ಥರು ಅಭಿವೃದ್ಧಿ ಕಾರ್ಯಗಳನ್ನು ಕೇಳಿ ಪಡೆಯುವಂತಾಗಬೇಕು. ಅಥವಾ ಗ್ರಾಮಗಳಲ್ಲಿ ಮುಖಂಡರಿಗೆ ತಿಳಿಸುವ ಮೂಲಕ ಸಮಗ್ರ ಅಭಿವೃದ್ದಿಗೆ ಗ್ರಾಮಸ್ಥರು ಕೂಡ ಕೈ ಜೋಡಿಸಬೇಕು ಎಂದರು.
ಹೋಬಳಿ ಕಾಂಗ್ರೆಸ್ ಮುಖಂಡ ಬಿ.ಜಿ.ನಾರಾಯಣಗೌಡ, ಗ್ರಾಪಂ ಅಧ್ಯಕ್ಷೆ ಭಾರತಿ ದೇವರಾಜ್, ಮಾಜಿ ಅಧ್ಯಕ್ಷರಾದ ಆನಂದ್ ಕುಮಾರ್, ರಾಧಾಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಗೀರ್ ಅಹಮದ್, ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಹಸಿಗಾಳ ಸೋಮಶೇಖರ್, ಮಂಜುನಾಥ್, ಮುನಿರಾಜ್, ಸುದರ್ಶನ್, ನಾರಾಯಣ್‌ಗೌಡ, ಹೇಮಂತ್ ಕುಮಾರ್, ರಘು ಇತರರಿದ್ದರು.ಫೋಟೋ: 12 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ಲಕ್ಕೊಂಡಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ್‌ಗೌಡ ಭೂಮಿಪೂಜೆ ನೆರವೇರಿಸಿದರು.