ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ: ಶಾಸಕ ಜಗದೀಶ ಗುಡಗುಂಟಿ

| Published : Nov 18 2024, 12:18 AM IST

ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ: ಶಾಸಕ ಜಗದೀಶ ಗುಡಗುಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮೊಬೈಲ್‌ ಮತ್ತು ಟಿವಿ ಬಂದಾಗಿನಿಂದ ಮಕ್ಕಳು ತಮ್ಮ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಾಲಕರು ಮತ್ತು ಶಿಕ್ಷಕರು ಇದರಿಂದಾಗುವ ದುಶ್ಪರಿಣಾಮ ಕುರಿತು ತಿಳಿಹೇಳಬೇಕಾದ ಅವಶ್ಯಕತೆವಿದೆ

ಕನ್ನಡಪ್ರಭ ವಾರ್ತೆ ಜಮಖಂಡಿ

ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸುವ ಜವಾಬ್ದಾರಿ ಗುರುಗಳ ಮೇಲಿದೆ. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ, ಸದೃಢ ಸಮಾಜ ನಿರ್ಮಾಣ ಮಾಡಬೇಕೆಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಭಾನುವಾರ ತಮ್ಮ ಗೃಹ ಕಚೇರಿ ಸಾಕ್ಷಾತ್ಕಾರ ಭವನದಲ್ಲಿ ತಾಲೂಕು ಜಂಗಮ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ತಾಲೂಕಿನ ಜಂಗಮ ಮಕ್ಕಳ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಬೈಲ್‌ ಮತ್ತು ಟಿವಿ ಬಂದಾಗಿನಿಂದ ಮಕ್ಕಳು ತಮ್ಮ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಾಲಕರು ಮತ್ತು ಶಿಕ್ಷಕರು ಇದರಿಂದಾಗುವ ದುಶ್ಪರಿಣಾಮ ಕುರಿತು ತಿಳಿಹೇಳಬೇಕಾದ ಅವಶ್ಯಕತೆವಿದೆ ಎಂದರು.

ಮಕ್ಕಳಿಗೆ ಗುರಿ ಹಾಗೂ ಅದನ್ನು ತಲುಪಲು ಪ್ರಯತ್ನ, ಉತ್ತಮ ಮಾರ್ಗದರ್ಶನ ಬೇಕು. ವಿಜ್ಞಾನ ಸಾಕಷ್ಟು ಮುಂದುವರೆದಿದ್ದು ಅನೇಕ ಉಪಯೋಗಗಳಾಗಿವೆ. ಅದರ ಜತೆಗೆ ಕೆಡಕಿಗೂ ಕಾರಣವಾಗಿದೆ. ಓದುವ ಹವ್ಯಾಸ ಕುಗ್ಗಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕಾಗಿದೆ. ಮೊಬೈಲ್‌ನಿಂದ ಸಂಬಂಧಗಳು ದೂರವಾಗುತ್ತಿದ್ದು, ದೈಹಿಕ ಚಟುವಟಿಕೆ, ಶ್ರಮ ಕಡಿಮೆಯಾಗುತ್ತಿದೆ ಎಂದರು.

1947ರಲ್ಲಿ 32 ಕೋಟಿ ಜನಸಂಖ್ಯೆ ಇದ್ದಾಗ ಬರಗಾಲ ಊಟಕ್ಕೂ ಗತಿ ಇಲ್ಲದ ಸಂದರ್ಭಗಳು ಬಂದು ಹೋಗಿವೆ. ಆದರೆ 140 ಕೋಟಿ ಜನರು ಅದೇ ದೇಶದಲ್ಲಿ ಉತ್ತಮವಾಗಿ ಬದುಕಲು, ವಿಜ್ಞಾನ ಹಾಗೂ ತಂತ್ರಜ್ಞಾನ ಕಾರಣವಾಗಿದೆ. ನೀರಾವರಿ, ಡ್ಯಾಂಗಳ ನಿರ್ಮಾಣ, ವಿವಿಧ ತಳಿಯ ಅಹಾರ ಪದಾರ್ಥಗಳ ಹೈಬ್ರಿಡ್‌ ಬೀಜಗಳನ್ನು ವಿಜ್ಞಾನಿಗಳು ಕಂಡು ಹಿಡಿದ ಪರಿಣಾಮವಾಗಿ ಇಂದು ಊಟಕ್ಕೆ ಗತಿಇಲ್ಲ ಎಂಬ ಪರಿಸ್ಥಿತಿ ಇಲ್ಲವಾಗಿದೆ. ಅನೇಕ ಜೀವ ರಕ್ಷಕ ಔಷಧಿಗಳನ್ನು ವಿಜ್ಞಾನದಿಂದಲೇ ಆವಿಷ್ಕರಿಸಲಾಗಿದೆ. ಬರೀ ಜಂಗಮ ಎಂದೆರೆ ಸಾಲದು ನಮಗೆ ಭಕ್ತರಾದ ವೀರಶೈವ ಲಿಂಗಾಯತರು ಬೇಕು ಎಂದರು.

ಬೆಂಗಳೂರಿನ ಡಾ. ರಾಜಶೇಖರ ಮಠಪತಿ (ರಾಗಂ) ಮಾತನಾಡಿ, ಜಂಗಮ ಸಮಾಜದಿಂದ ವಚನ ಸಾಹಿತ್ಯದಂತಹ ದೊಡ್ಡಮಟ್ಟದ ಸಾಹಿತ್ಯ ಬರಬೇಕಿತ್ತು. ಪಂಚ ಪೀಠಗಳಿಂದ ನಿರೀಕ್ಷೆಯಷ್ಟು ಸಾಹಿತ್ಯ ಬರಲಿಲ್ಲ. ಸಾಹಿತ್ಯ ಎಂಬುದು ಸಾಮಾನ್ಯವಾದುದಲ್ಲ ಅದು ಮನಸ್ಸು ಮತ್ತು ನಾಲಿಗೆ ಮೇಲೆ ಬರಬೇಕು ಅದನ್ನು ಸಾಹಿತ್ಯ ಎನ್ನುತ್ತಾರೆ. ಜಂಗಮತ್ವ ಮರೆತು ಹೋಗಿರುವ ಕಾಲದಲ್ಲಿ ನಾವಿದ್ದೇವೆ ಆದರೆ ಜ್ಞಾನ ಹಂಚುವ, ಮಾರ್ಗದರ್ಶನ ಮಾಡುವ ನಮ್ಮ ಮೂಲ ಕಸಬು ಬಿಡಬಾರದು. ಜಂಗಮತ್ವ, ಪೂಜೆ, ಪುನಸ್ಕಾರಗಳ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಕೊಡಬೇಕಾದ ಅವಶ್ಯಕತೆ ಇದೆ ಎಂದರು. ಕೊಣ್ಣುರು ಹೊರಗಿನ ಮಠದ ವಿಶ್ವಪ್ರಭು ಶಿವಾಚಾರ್ಯ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿ, ಮಕ್ಕಳಿಗೆ ಉತ್ತಮ ಉಡುಗೆ, ತೊಡುಗೆ, ಸಂಸ್ಕಾರ ನಮ್ಮ ಆಚಾರ, ವಿಚಾರ ಸಂಪ್ರದಾಯ ಹೇಳಿಕೊಡಬೇಕು ಎಂದರು.

ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು, ಮರೆಗುದ್ದಿ ಅಡವಿಸಿದ್ದೇಶ್ವರ ಮಠದ ನಿರುಪಾದಿಶ್ವರರು, ಹಿರೇಪಡಸಲಗಿ ಸಿದ್ಧಲಿಂಗ ಶಿವಾಚಾರ್ಯರು, ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯರು ಸಾನ್ನಿಧ್ಯ ವಹಿಸಿದ್ದರು. ಡಾ.ಕೆ.ಆಯ್‌.ಗುರುಮಠ ಕಾರ್ಯಕ್ರಮ ಉದ್ಘಾಟಿಸಿದರು.

ಸನ್ಮಾನ: ಡಾ.ಪ್ರಭಯ್ಯ ಗುರುಮಠ, ಡಾ.ಪ್ರತಿಭಾ ಗುರುಮಠ, ಡಾ. ಮಠಂ ಶಿವಕುಮಾರ, ಡಾ.ವಾಣಿಶ್ರೀ ಮಹಾಲಿಂಗಪೂರಮಠ, ಬಸವರಾಜ ಕಡ್ಡಿ. ಡಾ,ಶ್ರೀದೇವಿ ಸುವರ್ಣಖಂಡಿ, ಪ್ರಶಾಂತ ಹಿರೇಮಠ, ಬಸಯ್ಯ ಮಠಪತಿ, ಸಿದ್ದಗಿರಿಮಠ, ಈರಯ್ಯ ಕಲ್ಯಾಣಿ, ಕುಮಾರ ಸ್ವಾಮಿಮಠ, ಎಚ್‌.ಕೊಟ್ರೇಶ, ಜಯಪ್ರಕಾಶ ಅಜ್ಜವಡೆಯರಮಠ, ವಿ.ಎಲ್‌.ಹಿರೇಮಠ, ಎಂ.ಕೆ.ಹಿಟ್ಟಿನಮಠ, ಶಶಿಕಾಂತ ಮಾಲಗತ್ತಿಮಠ, ಪಂಚಾಕ್ಷರಿ ಹೊಸಮಠರನ್ನು ಸನ್ಮಾನಿಸಲಾಯಿತು. ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಕುರಿತಾದ ಯೋಗಸ್ಥ ಗ್ರಂಥ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಪುತ್ರ ಸಿದ್ಧಗಿರಿಮಠ, ಆರ್‌.ಎಸ್‌.ಅಕ್ಕಿ, ಅಶೋಕಗಾವಿ, ಜಿ,ಕೆ.ಮಠದ, ಮಲ್ಲಿಕಾರ್ಜುನಯ್ಯ ಮಠ, ಶಂಕ್ರಯ್ಯ ಕರಡಿಮಠ, ಬಸವಲಿಂಗ ಬೃಂಗಿಮಠ, ವಿರುಪಾಕ್ಷಯ್ಯ ಕಂಬಿ, ಬಸಯ್ಯ ಮಹಾಲಿಂಗಪೂರಮಠ, ಅಜಯ ಕಡಪಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.