ಸಾರಾಂಶ
ಅಫಜಲ್ಪುರ ತಾಲೂಕಿನ ಆನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬಿಸಿಯೂಟದ ಗುಣಮಟ್ಟ ಪರಿಶೀಲನೆ ನಡೆಸಿ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದ ಗ್ರಾಪಂ ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ.
ಕನ್ನಡಪ್ರಭ ವಾರ್ತೆ ಚವಡಾಪುರ
ಗ್ರಾಮೀಣ ಭಾಗಗಳಲ್ಲಿ ಬಹತೇಕ ರೈತರು, ಕೂಲಿ ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಾರೆ ಹೀಗಾಗಿ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಂದು ಗ್ರಾ.ಪಂ. ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ ಹೇಳಿದರು.ಅಫಜಲ್ಪುರ ತಾಲೂಕಿನ ಆನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬಿಸಿಯೂಟದ ಗುಣಮಟ್ಟ ಪರಿಶೀಲನೆ ನಡೆಸಿ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ಇಲಾಖೆಯ ಸೂಚನೆ ಮತ್ತು ನಿಯಮಾವಳಿಗಳ ಪ್ರಕಾರ ಬಿಸಿಯೂಟ ವಿತರಣೆ ಮಾಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಿ. ಶಾಲೆಗೆ ಬೇಕಾದ ಮೂಲ ಸೌಕರ್ಯಗಳ ಕುರಿತು ನಮ್ಮ ಗಮನಕ್ಕೆ ತಂದರೆ ಪಂಚಾಯ್ತಿ ವ್ಯಾಪ್ತಿಯ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಸೌಲಭ್ಯಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದ ಅವರು ಆನೂರ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಮಕ್ಕಳು ಆತಂಕದಲ್ಲಿ ವ್ಯಾಸಂಗ ಮಾಡುವಂತಾಗಿದೆ. ಈ ಕುರಿತು ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ಶಾಲಾ ಕಟ್ಟಡ ಕಾಮಗಾರಿ ಆರಂಭವಾಗಿ ನಮ್ಮೂರ ಮಕ್ಕಳಿಗೆ ಭಯಮುಕ್ತ ಕಲಿಕೆಗೆ ಅನುಕೂಲವಾಗುವಂತೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪಿಡಿಒ ಚಿದಾನಂದ ಆಲೆಗಾಂವ್, ಗಣಕಯಂತ್ರ ಸಿಬ್ಬಂದಿ ಹಣಮಂತ್ರಾಯ, ಪ್ರಮುಖರಾದ ಬಸು ಉಮ್ಮನಗೋಳ, ಚಿನ್ನಪ್ಪ ಉಮ್ಮನಗೋಳ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.