ಸಾರಾಂಶ
ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರಿನಲ್ಲಿ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜದ ಸಾವಿರಾರು ಜನರು 2ಏ ಮೀಸಲಾತಿ ಆಗ್ರಹಿಸಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 10 ಗಂಟೆಗೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು 11 ಗಂಟೆಗೆ ಹೆದ್ದಾರಿ ಪ್ರವೇಶಿಸಿದರು. ಮೀಸಲಾತಿ ವಿಳಂಬಕ್ಕೆ ಕಾರಣವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಮಾರ್ಗ ಬದಲಾವಣೆ ಮಾಡಿತ್ತು. ನೂರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ನೋಡಿಕೊಂಡಿತು.ಈ ವೇಳೆ ಮಾತನಾಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯಶ್ರೀ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂವಿಧಾನದ ಮೇಲೆ ನಂಬಿಕೆಯಿದ್ದರೆ ನಮಗೆ 2ಏ ಮೀಸಲಾತಿ ಕೊಡಬೇಕು. ಹಿಂದಿನ ಸರ್ಕಾರ ಮೀಸಲಾತಿ ನೀಡಿತ್ತಾದರೂ ಜಾರಿಗೆ ಬರಲಿಲ್ಲ. ಅದಕ್ಕೆ ನೂರೆಂಟು ಕಾರಣಗಳಿದ್ದರೂ ಕಳೆದ 3 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದೇವೆ ಎಂದರು.
ಶೇ. 95ರಷ್ಟು ಅಂಕ ಪಡೆದರೂ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಪಂಚಮಸಾಲಿ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ 2ಏ ಮೀಸಲಾತಿ ಅವಶ್ಯವಿದ್ದು, ಹೋರಾಟ ಅನಿವಾರ್ಯ. ಸ್ವಾಮೀಜಿ ನೋಡಿ ಹೋರಾಟಕ್ಕೆ ಬಂದಿದ್ದೀರೇ ಹೊರತು ರಾಜಕಾರಣಿಗಳನ್ನಲ್ಲ. ರಾಜಕೀಯ ದೃಷ್ಟಿಕೋನದಿಂದ ಹೋರಾಟವನ್ನು ನೋಡಬಾರದು ಅಥವಾ ವ್ಯಕ್ತಿಗತವಾಗಿ ಪರಿವರ್ತನೆಗೊಳಿಸಬಾರದು ಎಂದು ಅವರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು.ಸಂಸದ ಮಂಜುನಾಥ ಕುನ್ನೂರ, ಪಂಚಮಸಾಲಿಗಳಲ್ಲಿ ಬಡತನ ಅನುಭವಿಸುತ್ತಿರುವ ಕುಟುಂಬಗಳು ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗಿದ್ದು, 2ಎ ಮೀಸಲಾತಿ ಅನಿವಾರ‍್ಯ. ಹೋರಾಟದ ದಿಕ್ಕುಗಳು ಬದಲಾಗದೇ ಸಂಘಟಿತರಾಗುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಮಾತನಾಡಿ, 2ಎ ಮೀಸಲಾತಿ ಪ್ರಕಟಿಸುವ ಮೂಲಕ ಸರ್ಕಾರ ನಮ್ಮ ನ್ಯಾಯಸಮ್ಮತವಾದ ಹಕ್ಕುಗಳನ್ನುಗೌರವಿಸಬೇಕು ಎಂದು ಆಗ್ರಹಿಸಿದರು.ಭಾರತಿ ಜಂಬಗಿ ಮಾತನಾಡಿ, ವೀರರಾಣಿ ಕಿತ್ತೂರ ಚನ್ನಮ್ಮ ಪಂಚಮಸಾಲಿ ಸಮುದಾಯದ ಅಸ್ಮಿತೆ ಎಂದರು. ಹಿರೇಕೇರೂರ ಘಟಕದ ಅಧ್ಯಕ್ಷ ನಿಂಗಪ್ಪ ಚಳಗೇರಿ ಮಾತನಾಡಿ, ನಮ್ಮನ್ನು ಹೊರತುಪಡಿಸಿ ಅದರಲ್ಲಿದ್ದ ಪ್ರಮುಖರು ತಮ್ಮ ಜಾತಿಗಳಿಗೆ ಮೀಸಲಾತಿ ಪಡೆದಿದ್ದಾರೆ. ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಬೀದಿಗಿಳಿದ ಸನ್ನಿವೇಶವೇ ಅತ್ಯಂತ ದುರಂತದ್ದು. ಇಂತಹ ಮೋಸದ ಕೆಲಸವನ್ನು ವೀರಶೈವ ಮಹಾಸಭಾ ಕೈಬಿಡಬೇಕು ಎಂದು ಆಗ್ರಹಿಸಿದರು.
ಬೃಹತ್ ಪ್ರತಿಭಟನೆ: ಲಿಂಗಾಯತರು ಬೀದಿಯಲ್ಲಿ ಕುಳಿತು ಪೂಜೆ ಮಾಡಿದರೂ ಸರ್ಕಾರಕ್ಕೆ ಕನಿಕರ ಬರುತ್ತಿಲ್ಲ. ಜ. 20ರೊಳಗೆ ಸಮಿತಿ ಸಭೆಯನ್ನು ಕರೆದು, ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದಾವಣಗೆರೆ ಅಥವಾ ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಪಂಚಮಸಾಲಿಗಳಿಂದ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪ್ರತಿಭಟನೆಕಾರರು ಎಚ್ಚರಿಕೆ ನೀಡಿದರು.