ಎನ್.ಸಿ.ಸಿ ಕೆಡೆಟ್‌ಗಳಿಗೆ ಪರೀಕ್ಷೆಯಲ್ಲಿ ಮೀಸಲಾತಿ ನೀಡಿ

| Published : Jul 26 2024, 01:30 AM IST

ಸಾರಾಂಶ

ಎನ್.ಸಿ.ಸಿ. ಕೆಡೆಟ್‌ಗಳಿಗೆ ಕೆಪಿಎಸ್‌ಸಿ ವತಿಯಿಂದ ನಡೆಯುವ ವಿವಿಧ ಹುದ್ದೆಗಳ ಪರೀಕ್ಷೆಯಲ್ಲಿ ಮೀಸಲಾತಿ ನೀಡಬೇಕು

ಕನ್ನಡಪ್ರಭ ವಾರ್ತೆ ತುಮಕೂರುಕೇಂದ್ರ ಸರ್ಕಾರದ ಎಸ್.ಎಸ್.ಸಿ ರೀತಿಯೇ ರಾಜ್ಯ ಸರ್ಕಾರವೂ ಎನ್.ಸಿ.ಸಿ. ಕೆಡೆಟ್‌ಗಳಿಗೆ ಕೆಪಿಎಸ್‌ಸಿ ವತಿಯಿಂದ ನಡೆಯುವ ವಿವಿಧ ಹುದ್ದೆಗಳ ಪರೀಕ್ಷೆಯಲ್ಲಿ ಮೀಸಲಾತಿ ನೀಡಬೇಕು. ಇದರಿಂದ ಹೆಚ್ಚು ಯುವಕರು ಎನ್.ಎಸ್.ಸಿ ತರಬೇತಿ ಪಡೆಯಲು ನೆರವಾಗಬೇಕೆಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಒತ್ತಾಯಿಸಿದ್ದಾರೆ.ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಹಾಲಪ್ಪ ಪ್ರತಿಷ್ಠಾನ, ತುಮಕೂರು ವಿವಿ, ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್ಸ್ ಅಂಡ್ ಗೈಡ್ಸ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹಾಗೂ ಗೃಹರಕ್ಷಕ ದಳ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ 25 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿಯೂ ಎನ್.ಸಿ.ಸಿ. ಮೀಸಲಾತಿ ನೀಡುವುದರಿಂದ ಮಕ್ಕಳಲ್ಲಿ ಶಿಸ್ತು ಬದ್ದ ಜೀವನದ ಜೊತೆಗೆ, ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು.

ಯುವ ಸಬಲೀಕರಣವೇ ಇಂದಿನ ಕಾರ್ಗಿಲ್ ವಿಜಯೋತ್ಸವದ ಪ್ರಮುಖ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ವ್ಯಸನ ಹೆಚ್ಚಾಗಿದೆ. ಶಾಲಾ, ಕಾಲೇಜು ಮಕ್ಕಳು ಅತಿ ಹೆಚ್ಚಿನ ರೀತಿ ಇದಕ್ಕೆ ಬಲಿಯಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನ್ಲಲಿ ಎನ್.ಸಿ.ಸಿ, ಎನ್.ಎಸ್.ಎಸ್. ಹೋಂ ಗಾರ್ಡ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ದೇಶದ ಗಡಿಯನ್ನು ಸೈನಿಕರು ಕಾಯ್ದು ನಮ್ಮನ್ನು ರಕ್ಷಿಸುವ ರೀತಿ, ದೇಶದ ಒಳಗಿನ ಜನರನ್ನು ನಾವುಗಳು ವಿಛಿದ್ರಕಾರಿ ಶಕ್ತಿಗಳಿಂದ ಕಾಪಾಡಲು ಒಂದಾಗಬೇಕಾಗಿದೆ. ತುಮಕೂರಿನಿಂದ ಇಡೀ ರಾಜ್ಯಕ್ಕೆ ಡ್ರಗ್ಸ್‌ಮುಕ್ತ ಕ್ಯಾಂಪಸ್ ಎನ್ನುವ ಸಂದೇಶವನ್ನು ನಾವೆಲ್ಲರೂ ನೀಡಬೇಕಾಗಿದೆ ಎಂದರು.ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಹವಾಲ್ದಾರ್ ನಾಗರಾಜು ಮಾತನಾಡಿ, ಕಾರ್ಗಿಲ್ ಯುದ್ದದಲ್ಲಿ ತಾವು ಪಾಲ್ಗೊಂಡ ರೀತಿಯನ್ನು ವಿವರಿಸಿದರು. ದೇಶದ ಅತ್ಯುತ್ತಮ ಸೇವೆಗಳಲ್ಲಿ ಸೇನೆಯೂ ಒಂದಾಗಿದೆ. ದೇಶದ ಜನರನ್ನು ರಕ್ಷಿಸುವ ಹೊಣೆಗಾರಿಕೆ ಸೇನೆಯ ಮೇಲಿರುತ್ತದೆ. ಅದಕ್ಕೆ ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಸೈನಿಕರು ಹೋರಾಡುತ್ತಾರೆ. ತುಮಕೂರಿಗೆ ಸೈನಿಕರ ನಾಡು ಎಂಬ ಹೆಸರು ತರುವ ನಿಟ್ಟಿನಲ್ಲಿ ನಾವೆಲ್ಲರೂ ಸೇನೆಗೆ ಸೇರುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.ಕಾರ್ಯವಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಸಿ.ಸಿ. ಆಫಿಸರ್ ಕ್ಯಾಪ್ಟನ್ ರಾಮಲಿಂಗಾರೆಡ್ಡಿ, ಕಾರ್ಗಿಲ್ ಯುದ್ದ ಇಡೀ ವಿಶ್ವಕ್ಕೆ ಭಾರತೀಯ ಸೇನೆಯ ಶಕ್ತಿ, ಸಾಮರ್ಥ್ಯವನ್ನು ಪರಿಚಯಿಸುವ ಮೂಲಕ ವಿಶ್ವ ಗುರುವನ್ನಾಗಿಸಿದೆ ಎಂದರು.ಕಾರ್ಯಾಕ್ರಮದಲ್ಲಿ ಎನ್.ಎಸ್.ಸಿ. ಮಕ್ಕಳಿಂದ ಶೋಕ ಚಕ್ರ ರಚಿಸಿ, ನೆರೆದಿದ್ದ ಗಣ್ಯರು ಶೋಕಚಕ್ರಕ್ಕೆ ಪುಷ್ಪಗುಚ್ಚ ಇರಿಸುವ ಮೂಲಕ ನಮನ ಸಲ್ಲಿಸಿದರು. ಕಾರ್ಗಿಲ್ ಯುದ್ದದ ಅಣುಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮಕ್ಕಳಿಂದ ಸಾಂಸ್ಕೃತಿಕ ಕರ್ಯಚಕ್ರಮಗಳು ಜರುಗಿದವು. ವೇದಿಕೆಯಲ್ಲಿ ಎನ್.ಎಸ್.ಸಿ ಹಿರಿಯ ಅಧಿಕಾರಿ ಕರ್ನಲ್‌ ಜಿ.ಎಸ್.ಗುಜ್ರಾಲ್,ಕರ್ನಲ್‌ ನರೇಂದ್ರ ಬಂಡಾರಿ, ಸುಬೇದಾರ್ ಮೇಜರ್ ದಿನೇಶ್‌ಸಿಂಗ್, ಹೋಂ ಗಾರ್ಡ ಕಮಾಂಡೆಂಟ್ ಪಾತಣ್ಣ, ಸ್ಕೌಟ್ಸ್‌ನ ಸುಭಾಷಿಣಿ ರವೀಶ್, ಪಾಂಡುರಂಗಪ್ಪ, ಕ್ಯಾಪ್ಟನ್ ಜೈಪ್ರಕಾಶ್, ಹೆರಿಟೇಜ್ ಪೌಂಢಷನ್ ಸಿಇಓ ಕಲ್ಪನಾ ಮುರುಳೀಧರ್, ವಕೀಲ ಪೃಥ್ವಿ ಹಾಲಪ್ಪ, ಸಿದ್ದಲಿಂಗೇಗೌಡ, ಕ್ರೀಡಾಪುಟು ಟಿ.ಕೆ.ಆನಂದ್, ರೇವಣ್ಣಸಿದ್ದಯ್ಯ, ನಟರಾಜು, ಅದಿಲ್ ಪಾಷ, ಕುತುಬುದ್ದೀನ್, ಸುಕನ್ಯಾ, ವಸುಂಧರ, ಗೀತಾ, ಪ್ರೊ. ಬಿ. ಕರಿಯಣ್ಣ, ಪ್ರೊ.ಕೆ.ರಾಮಚಂದ್ರಪ್ಪ, ಪ್ರೊ. ಟಿ. ಎನ್. ಹರಿಪ್ರಸಾದ್, ಡಾ. ರವಿ ಸಿ. ಎಂ.,ಇನ್ನಿತರರು ಇದ್ದಾರೆ.