ಆಂಗ್ಲ ವ್ಯಾಮೋಹ ಬಿಟ್ಟು ಕನ್ನಡಕ್ಕೆ ಗೌರವ ನೀಡಿ

| Published : Dec 04 2024, 12:32 AM IST

ಸಾರಾಂಶ

ರಾಜ್ಯೋತ್ಸವ ಕೇವಲ ನವಂಬರ್ ತಿಂಗಳಲ್ಲಿ ಆಚರಿಸಿದರೆ ಸಾಲದು. ಪ್ರತಿ ಹಂತಗಳಲ್ಲಿ ನಾವು ಕನ್ನಡದಲ್ಲೇ ಮಾತನಾಡಿ, ಕನ್ನಡಕ್ಕೆ ಗೌರವ ನೀಡಬೇಕು. ಆಗ ಮಾತ್ರ ಇಂತಹ ರಾಜ್ಯೋತ್ಸವ ಸಂಭ್ರಮ ಸಾರ್ಥಕ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟಿದ್ದಾರೆ.

- ರಾಜ್ಯೋತ್ಸವ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶಾಂತನಗೌಡ

- ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಕನಕಶ್ರೀ ಪ್ರಶಸ್ತಿ ಪ್ರಧಾನ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯೋತ್ಸವ ಕೇವಲ ನವಂಬರ್ ತಿಂಗಳಲ್ಲಿ ಆಚರಿಸಿದರೆ ಸಾಲದು. ಪ್ರತಿ ಹಂತಗಳಲ್ಲಿ ನಾವು ಕನ್ನಡದಲ್ಲೇ ಮಾತನಾಡಿ, ಕನ್ನಡಕ್ಕೆ ಗೌರವ ನೀಡಬೇಕು. ಆಗ ಮಾತ್ರ ಇಂತಹ ರಾಜ್ಯೋತ್ಸವ ಸಂಭ್ರಮ ಸಾರ್ಥಕ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ತಾಲೂಕು ಯುವಶಕ್ತಿ ಒಕ್ಕೂಟ ಹಾಗೂ ಕನಕ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಂಗ್ಲಭಾಷೆ ವ್ಯಾಮೋಹದಿಂದ ಇಂದು ಗ್ರಾಮೀಣ ಮಹಿಳೆಯರು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗೆ ಸೇರಿಸಬೇಕೆಂಬ ಹಂಬಲ ಹೊಂದಿದ್ದಾರೆ. ಇದು ಶಿಕ್ಷಣ ದೃಷ್ಟಿಯಿಂದ ಸರಿಯಾದರೂ, ಮಾತೃಭಾಷೆಗೆ ಆದ್ಯತೆ ನೀಡಿ, ಗೌರವದಿಂದ ನಮ್ಮ ಭಾಷೆ ಪ್ರೀತಿಸಬೇಕು. ಅಪ್ಪ-ಅಮ್ಮ ಪದಗಳು ಹೋಗಿ ಮಮ್ಮಿ-ಡ್ಯಾಡಿ ಎಂದು ಕೂಗುವ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಮೊದಲು ಕನ್ನಡ ಭಾಷೆಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದರು.

ಕಪ್ಪುಚುಕ್ಕೆ ಇಲ್ಲದ ಸಂಸದ:

ರಾಜಕೀಯ ವಿಷಮ ಪರಿಸ್ಥಿತಿಯಲ್ಲೂ ಒಬ್ಬ ವ್ಯಕ್ತಿ ಸತತ 4 ಬಾರಿ ಸಂಸದರಾಗಿ 1 ಬಾರಿ ಶಿಕಾರಿಪುರದ ಶಾಸಕರಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ, ಅಭಿವೃದ್ಧಿಗೆ ಸಹಕಾರ ನೀಡುತ್ತಿರುವವರು ಸಂಸದ ಬಿ.ವೈ,ರಾಘವೇಂದ್ರ. ಅವರು ಅಪರೂಪದ ರಾಜಕಾರಣಿ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸಪೇಟೆಯಿಂದ ಶಿವಮೊಗ್ಗದವರೆಗೂ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಬಳ್ಳಾರಿ ಸಂಸದ ತುಕಾರಾಂ ಈ ಮೂವರು ಕೇಂದ್ರ ಸರ್ಕಾರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಅನುದಾನಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಅವರ ಈ ಕಾರ್ಯಕ್ಕೆ ಕೈ ಜೋಡಿಸುತ್ತೇನೆ ಎಂದು ತಿಳಿಸಿದರು.

ಕನಕಶ್ರೀ ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಮ್ಮ ಮಾತೃಭಾಷೆ ಕನ್ನಡ ನಮಗೆ ಅನ್ನ ಕೊಡುವ ಭಾಷೆ. ಆ ಭಾಷೆಯನ್ನೇ ಮರೆತರೆ ನಮ್ಮ ಹೆತ್ತ ತಾಯಿಯನ್ನೇ ಮರೆತಂತೆ ಎಂಬುದನ್ನು ಯಾರೂ ಮರೆಯಬಾರದು. ಮೊದಲು ಕನ್ನಡ ಭಾಷೆಗೆ ಅಗ್ರಸ್ಥಾನ ಕೊಡಬೇಕು ಎಂದರು.

ಹೊಸಪೇಟೆಯಿಂದ ಶಿವಮೊಗ್ಗದವರೆಗೆ ರಸ್ತೆಗಳು ತುಂಬಾ ಹಾಳಾಗಿವೆ. ಈ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ, ಅದಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಬಳ್ಳಾರಿ ಸಂಸದ ತುಕಾರಾಂ, ದಾವಣಗೆರೆ ಸಂಸದೆ ಪ್ರಭಾಮಲ್ಲಿಕಾರ್ಜುನ್ ಹಾಗೂ ತಾನು ಕೇಂದ್ರ ಭೂ ಸಾರಿಗೆ ನಿತಿನ್‌ ಗಡ್ಕರಿ ಅವರನ್ನು ಮನವಿ ಮಾಡುತ್ತಿದ್ದೇವೆ ಎಂದರು.

ಡಿ.ಜಿ. ಶಾಂತನಗೌಡ ಸಚಿವರಾಗಲಿ:

ಅತ್ಯಂತ ಸರಳ, ಸಜ್ಜನಿಕೆಗೆ ಹೆಸರಾಗಿರುವ ಶಾಸಕ ಡಿ.ಜಿ. ಶಾಂತನಗೌಡ ಅವರ ಹಿರಿತನಕ್ಕೆ ಈ ಹಿಂದೆಯೇ ಅವರು ಮಂತ್ರಿ ಆಗಬೇಕಿತ್ತು. ಈಗಲಾದರೂ ಅವರಿಗೆ ಸಚಿವರಾಗುವ ಭಾಗ್ಯ ಸಿಗಲಿ ಎಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸುವುದಾಗಿ ಬಿವೈಆರ್‌ ಹೇಳಿದರು.

ತಹಸೀಲ್ದಾರ್ ಪಟ್ಟರಾಜಗೌಡ, ಪುರಸಭಾಧ್ಯಕ್ಷ ಮೈಲಪ್ಪ, ಮುಖ್ಯಾಧಿಕಾರಿ ಲೀಲಾವತಿ, ಮಾಜಿ ಜಿ.ಪಂ. ಸದಸ್ಯ ಕೆ.ವಿ.ಚನ್ನಪ್ಪ ಮಾತನಾಡಿದರು.

ಯುವಶಕ್ತಿ ಒಕ್ಕೂಟದ ಅಧ್ಯಕ್ಷ ರಾಯಪ್ಪಗೌಡ, ಕತ್ತಿಗೆ ನಾಗರಾಜು, ಪುರಸಭಾ ಸದಸ್ಯ ಹೊಸಕೇರಿ ಸುರೇಶ್, ಕುಮಾರ ಸ್ವಾಮಿ, ಉಪನ್ಯಾಸಕ ಪಾಂಡುರಂಗ, ಬಸಣ್ಣ, ಭೋಜರಾಜ್, ಸುರೇಶ್ ಹಾಗೂ ಇತರರು ಇದ್ದರು.

- - -

ಟಾಪ್‌ ಕೋಟ್‌ ಕನಕಶ್ರೀ ಪ್ರಶಸ್ತಿಯನ್ನು ನೀವು ನನಗೆ ಕೊಟ್ಟಿದ್ದಿರಿ, ನಮ್ಮ ತಂದೆ ಅವರು ಸಹ ಜಾತ್ಯಾತೀತ ನಿಲುವಿನಲ್ಲೇ ಹೋರಾಟ ಮಾಡುತ್ತಿದ್ದಾರೆ.ನಾವೂ ಸಹ ಅದೇ ಮಾರ್ಗದಲ್ಲಿ ನಡೆಯುತ್ತಿದ್ದೇವೆ, ಮುಂದೆಯೂ ಸಹ ನಾವು ಕನಕದಾಸರ ಆಶಯದಂತೆ ಜಾತೀಯನ್ನು ಮೀರಿ ಎಲ್ಲಾ ವರ್ಗದವರಿಗೂ ಸಹಾಯ ಮಾಡುತ್ತೇನೆ

- ಬಿ.ವೈ.ರಾಘವೇಂದ್ರ, ಸಂಸದ, ಶಿವಮೊಗ್ಗ ಕ್ಷೇತ್ರ

- - - -3ಎಚ್.ಎಲ್.ಐ2.ಜೆಪಿಜಿ:

ಹೊನ್ನಾಳಿ ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.