ರೇಣುಕಾಸ್ವಾಮಿ ಹಂತಕರಿಗೆ ಕಠಿಣ ಶಿಕ್ಷೆ ಕೊಡಿ: ವೀರಶೈವ ಮಹಾಸಭಾ

| Published : Jun 13 2024, 12:49 AM IST

ಸಾರಾಂಶ

ರೇಣುಕಾಸ್ವಾಮಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾ, ಕೃತ್ಯ ಎಸಗಿರುವವರು ಮತ್ತು ಸಹಕಾರ ನೀಡಿದ ಎಲ್ಲರಿಗೂ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾ, ಕೃತ್ಯ ಎಸಗಿರುವವರು ಮತ್ತು ಸಹಕಾರ ನೀಡಿದ ಎಲ್ಲರಿಗೂ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮಹಾಸಭಾ ಕಾರ್ಯದರ್ಶಿ ಎಚ್‌.ಎಂ.ರೇಣುಕ ಪ್ರಸನ್ನ, ಸರ್ಕಾರ ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗಬಾರದು. ಆರೋಪಿಗಳನ್ನು ರಕ್ಷಿಸದೆ ಸಾಮಾನ್ಯ ಜನರ ಜೊತೆಗೆ ನಾವು ಇದ್ದೇವೆ ಎಂಬುದನ್ನು ತೋರಿಸಬೇಕು. ಹತ್ಯೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಮಹಾಸಭಾದಿಂದ ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಬೇಕಾಗುತ್ತದೆ ಎಂದಿದ್ದಾರೆ.

ಘಟನೆಯಲ್ಲಿ ಸರ್ಕಾರ ಪ್ರಭಾವಿ ವ್ಯಕ್ತಿಗಳ ಪರ ನಿಲ್ಲದೇ ಮೃತನ ಕುಟುಂಬದ ಜೊತೆ ನಿಲ್ಲುವುದು ಆದ್ಯ ಕರ್ತವ್ಯವಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರ ಅಗತ್ಯ ನೆರವನ್ನು ನೀಡಬೇಕು. ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಲು ಮಹಾಸಭಾ ಸದಾ ಸಿದ್ಧವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.ಹತ್ಯೆ ಖಂಡಿಸಿ ಅಭಿಯಾನ:

ವೀರಶೈವ ಲಿಂಗಾಯತ ಮಹಾ ವೇದಿಕೆಯು ರೇಣುಕಾ ಸ್ವಾಮಿ ಹತ್ಯೆ ಖಂಡಿಸಿ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಜೂ.13 ರಂದು ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೂ ‘ರೇಣುಕಾಸ್ವಾಮಿ ಕಗ್ಗೊಲೆಗೆ ನ್ಯಾಯ ಕೊಡಿ’ ಎಂದು ಅಭಿಯಾನ ಆರಂಭಿಸುವುದಾಗಿ ತಿಳಿಸಿದ್ದು, ಸಾರ್ವಜನಿಕರ ಬೆಂಬಲ ಕೋರಿದೆ.