ನೇಹಾ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ: ರೂಪಾಲಿ ನಾಯ್ಕ

| Published : Apr 23 2024, 12:54 AM IST

ನೇಹಾ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ: ರೂಪಾಲಿ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ರಕ್ಷಣೆಯೇ ಇಲ್ಲವೆಂದಾದರೆ ಯಾವ ಗ್ಯಾರಂಟಿ ನೀಡಿದರೆ ಏನು ಪ್ರಯೋಜನವಿದೆ? ಹುಬ್ಬಳ್ಳಿಯ ಘಟನೆ ಮರುಕಳಿಸದಂತೆ ಆಗಲು ಕಠಿಣ ಶಿಕ್ಷೆ ಆಗಬೇಕು.

ಕಾರವಾರ: ನೇಹಾ ಹಿರೇಮಠ ಕೊಲೆ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೂಡಲೇ ಗೃಹ ಸಚಿವ ಜಿ. ಪರಮೇಶ್ವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ನೇಹಾ ಪ್ರಕರಣಕ್ಕೆ ಸಂಬಂಧಿಸಿ ಯಾರ ಓಲೈಕೆಗಾಗಿ ಸೂಕ್ತ, ನಿಷ್ಪಕ್ಷಪಾತ ತನಿಖೆ ಮಾಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ? ಹನುಮಾನ ಚಾಲೀಸಾ ಪಠಿಸಿದರೆ ಹಲ್ಲೆ ಮಾಡುತ್ತಾರೆ. ಹಿಂದುಗಳ ಮೇಲೆ ಹಲ್ಲೆ, ಹತ್ಯೆ ಆಗುತ್ತಿದೆ. ರಾಜ್ಯದಲ್ಲಿ ಏನು ನಡೆಯುತ್ತಿದೆ. ಬಹುಸಂಖ್ಯಾತ ಹಿಂದೂಗಳು ಬದುಕಲು ಅವಕಾಶವೇ ಇಲ್ಲವೇ? ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡಿ. ಜನರಿಗೆ ರಕ್ಷಣೆಯೇ ಇಲ್ಲವೆಂದಾದರೆ ಯಾವ ಗ್ಯಾರಂಟಿ ನೀಡಿದರೆ ಏನು ಪ್ರಯೋಜನವಿದೆ? ಹುಬ್ಬಳ್ಳಿಯ ಘಟನೆ ಮರುಕಳಿಸದಂತೆ ಆಗಲು ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕರ್ನಾಟಕ ಎಂದರೆ ಶಾಂತಿಪ್ರಿಯ ರಾಜ್ಯವಾಗಿದೆ. ಇಂತಹ ಪ್ರದೇಶದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗಿದೆ ಎಂದರೆ ಏನರ್ಥ? ಹಿಂದೂಗಳಿಗೆ ಓಲೈಸಿದರೆ ಮೋದಿ ಪ್ರಧಾನಿ ಅಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಗೃಹ ಸಚಿವ ಪರಮೇಶ್ವರ ಮುಸಲ್ಮಾನರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎನ್ನುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಓಲೈಕೆ ರಾಜಕಾರಣ ಮಾಡುತ್ತಿದೆ. ರಾಜ್ಯದ ಜನರ ಒಳಿತಿಗೆ ಸರ್ಕಾರ ಏನು ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಗೆ ಹೀಗಾದರೆ ಹೇಗೆ? ಸಿಎಂ, ಗೃಹ ಸಚಿವರು ಹೊಣೆಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಎಂಎಲ್‌ಸಿ ಶಾಂತಾರಾಮ ಸಿದ್ದಿ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ನಾಗರಾಜ ನಾಯಕ ಮೊದಲಾದವರು ಇದ್ದರು.ಡಿಸಿ ಬರಲು ಆಗ್ರಹ

ಬಿಜೆಪಿಗರ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಆಗಮಿಸಿದರು. ಆದರೆ ಜಿಲ್ಲಾಧಿಕಾರಿಯೇ ಬರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹೀಗಾಗಿ ಎಡಿಸಿ ವಾಪಸ್ ತೆರಳಿದರು.

ಸ್ಥಳದಲ್ಲಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಸಿ.ಟಿ. ಜಯಕುಮಾರ ಇಂದು ನಾಮಪತ್ರ ವಾಪಸ್ ತೆಗೆದುಕೊಳ್ಳುವ ದಿನವಾದ್ದರಿಂದ ಅವರೇ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದು, ಡಿಸಿ ಈ ಕ್ಷಣದಲ್ಲಿ ಬರಲು ಆಗುವುದಿಲ್ಲ. ಮಧ್ಯಾಹ್ನ ೩ ಗಂಟೆ ಆನಂತರ ಚುನಾವಣಾ ಕರ್ತವ್ಯ ಮುಗಿಯುತ್ತದೆ ಎಂದು ತಿಳಿಸಿದರು. ಈ ವೇಳೆ ಬಿಜೆಪಿಗರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಒಂದು ತಾಸಿಗೂ ಅಧಿಕಾಲ ಕಾದ ಪ್ರತಿಭಟನಾಕಾರರು ಕೊನೆಗೆ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗೆ ಮನವಿ ಸಲ್ಲಿಸಿದರು.