ಸಾರಾಂಶ
ಸವದತ್ತಿಯಲ್ಲಿ ಅಕ್ಷರದಾಸೋಹ ಕಾರ್ಯಕರ್ತೆಯರು ವಂಟಮುರಿಯಲ್ಲಿ ಮಹಿಳೆಯ ಮೇಲೆ ಆಗಿರುವಂತ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ಮೂಲಕ ಮಿನಿ ವಿಧಾನಸೌಧದ ಮುಂದೆ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ವಂಟಮೂರಿಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಅಕ್ಷರದಾಸೋಹ ಸಂಘಟನೆ ಹಾಗೂ ಸಿಐಟಿಯು ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಎಲ್.ಎಸ್.ನಾಯಕ ಮಾತನಾಡಿ, ವಂಟಮೂರಿಯಲ್ಲಿ ಮಹಿಳೆಯ ಮೇಲೆ ಆಗಿರುವಂತ ದೌರ್ಜನ್ಯವನ್ನು ಅವಲೋಕಿಸಿದಾಗ ಇಂದು ಜ್ಞಾನ ತಂತ್ರಜ್ಞಾನ ಪ್ರಗತಿಯಲ್ಲಿದ್ದರೂ ಸಹಿತ 21ನೇ ಶತಮಾನದಿಂದ ನಾವು ಹಿಂದಿನ ಶತಮಾನದತ್ತ ಸಾಗುತ್ತಿದ್ದೇವೆನೋ ಎಂಬ ಭಾಸವಾಗುತ್ತಿದೆ. ಈ ಹೀನ ಘಟನೆಯಲ್ಲಿ ಪಾಲ್ಗೊಂಡಂತ ದುರುಳರಿಗೆ ಶಿಕ್ಷೆ ವಿಧಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಶ್ರೀಕಾಂತ ಹಟ್ಟಿಹೊಳಿ ಮಾತನಾಡಿ, ಮಹಿಳೆಯನ್ನು ಬೆತ್ತಲೆಗೊಳಿಸಿ ಅವಳಿಗೆ ಚಿತ್ರಹಿಂಸೆ ನೀಡಿರುವ ಘಟನೆ ಖಂಡನಾರ್ಹವಾಗಿದ್ದು, ಈ ದೌರ್ಜನ್ಯ ಪಶು ಪ್ರವೃತ್ತಿಯನ್ನು ನಾಚಿಸುವಷ್ಟು ಅಮಾನುಷವಾಗಿರುವುದರಿಂದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಕ್ಷರದಾಸೋಹ ಕಾರ್ಯಕರ್ತೆಯರು ಘಟನೆಯನ್ನು ಖಂಡಿಸಿ ಶ್ರೀಕಲ್ಮಠದಿಂದ ಪ್ರತಿಭಟನೆಯನ್ನು ಆರಂಭಿಸಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನಾ ಘೋಷಣೆ ಕೂಗುತ್ತ ಮಿನಿವಿಧಾನಸೌಧ ತಲುಪಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.