ಜು. 21ರೊಳಗೆ ಹುತಾತ್ಮ ರೈತನ ಸ್ಮಾರಕ ಭವನ ನಿರ್ಮಾಣಕ್ಕೆ ಜಾಗ ನೀಡಿ

| Published : Jul 01 2024, 01:45 AM IST

ಜು. 21ರೊಳಗೆ ಹುತಾತ್ಮ ರೈತನ ಸ್ಮಾರಕ ಭವನ ನಿರ್ಮಾಣಕ್ಕೆ ಜಾಗ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಹಾಗೂ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಜು. 21ರಂದು ಆಚರಿಸಲಾಗುವ ರೈತ ಹುತಾತ್ಮ ದಿನಾಚರಣೆಗೆ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡು, ಸೂಕ್ತ ಬಂದೋಬಸ್ತ್ ಒದಗಿಸಬೇಕು

ರೈತ ಹುತಾತ್ಮ ದಿನಾಚರಣೆ-ಪೂರ್ವಭಾವಿ ಸಭೆಯಲ್ಲಿ ರೈತರ ಆಗ್ರಹ

ಕನ್ನಡಪ್ರಭ ವಾರ್ತೆ ನರಗುಂದ

ಪಟ್ಟಣ ಹಾಗೂ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಜು. 21ರಂದು ಆಚರಿಸಲಾಗುವ ರೈತ ಹುತಾತ್ಮ ದಿನಾಚರಣೆಗೆ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡು, ಸೂಕ್ತ ಬಂದೋಬಸ್ತ್ ಒದಗಿಸಬೇಕು ಎಂದು ತಹಸೀಲ್ದಾ‌ರ್ ಶ್ರೀಶೈಲ ತಳವಾರ ಅಧಿಕಾರಿಗಳಿಗೆ ಸೂಚಿಸಿದರು.

ರೈತ ಹುತಾತ್ಮ ದಿನಾಚರಣೆ ಅಂಗವಾಗಿ ತಹಸೀಲ್ದಾ‌ರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರೈತಪರ, ಕನ್ನಡಪರ ಸಂಘಟನೆಗಳ ಸದಸ್ಯರು, ವಿವಿಧ ಇಲಾಖೆ ಅಧಿಕಾರಿ, ರಾಜಕೀಯ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜು. 21ರಂದು ನರಗುಂದದಲ್ಲಿ ರೈತ ಹುತಾತ್ಮ ದಿನಾಚರಣೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ರೈತರು ಪಾಲ್ಗೊಳ್ಳುವುದರಿಂದ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದರು.

ರೈತರು, ಕನ್ನಡಪರ ಸಂಘಟನೆಗಳ ಮುಖಂಡರು ಮಾತನಾಡಿ, ಪಟ್ಟಣದಲ್ಲಿ 1980ರಲ್ಲಿ ನಿರ್ಮಿಸಿರುವ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲು ಜೀರ್ಣೋದ್ಧಾರವಾಗಬೇಕು. ಹುತಾತ್ಮ ರೈತನ ಸ್ಮರಣಾರ್ಥ ಸುಂದರವಾದ ಸ್ಮಾರಕ ಭವನ ನಿರ್ಮಿಸಲು ಆಗ್ರಹಿಸಿದರು.

ಈ ಸ್ಮಾರಕ ನಿರ್ಮಾಣ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ಮಾಹಿತಿ ನೀಡಿದರು.

ನಿವೇಶನ ಒದಗಿಸುವ ಜತೆಗೆ ಸರ್ಕಾರದಿಂದ ಅನುದಾನ ನೀಡಬೇಕು ಎಂದು ಈಗಾಗಲೇ ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಹುತಾತ್ಮ ರೈತನ ಸ್ಮಾರಕ ಭವನ ನಿರ್ಮಾಣಕ್ಕೆ ಜು. 21ರೊಳಗಾಗಿ ನಿವೇಶವನ್ನಾದರೂ ನೀಡುವಂತೆ ತಹಸೀಲ್ದಾ‌ರ್‌ಗೆ ಒತ್ತಾಯಿಸಿದರು. ತಹಸೀಲ್ದಾರ್ ಪ್ರತಿಕ್ರಿಯಿಸಿ, ಸ್ಮಾರಕ ಭವನ ನಿರ್ಮಿಸಲು ಈಗಾಗಲೇ ಜಾಗ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ನಿವೇಶನ ದೊರೆತ ಆನಂತರ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ, ಕರವೇ ತಾಲೂಕು ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ರೈತಸೇನೆ ಸದಸ್ಯ ಈರಬಸಪ್ಪ ಹೂಗಾರ, ಚನ್ನು ನಂದಿ, ಎಸ್.ಬಿ. ಜೋಗಣ್ಣವರ, ಕಳಸಾ ಬಂಡೂರಿ ಕೇಂದ್ರ ಯುವ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಬಸ್ಸು ತಾವರೆ, ಈರಪ್ಪ ಮ್ಯಾಗೇರಿ, ವೀರಣ್ಣ ಸೊಪ್ಪಿನ, ಸುಭಾಸ ಗಿರಿಯನ್ನವರ ಇದ್ದರು.