ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ಕ್ಯಾಬಿನೆಟ್ ಸಭೆ ನಡೆಸುತ್ತಿರುವುದಕ್ಕೆ ಬಹುಜನ ಸಮಾಜ ಪಾರ್ಟಿ ಅಭಿನಂದಿಸುತ್ತದೆ. ಈ ಸಂಪುಟ ಸಭೆಯಲ್ಲಿ ವಿಶೇಷ ಅನುದಾನ ನೀಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ಬಿಎಸ್ಪಿ ರಾಜ್ಯ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಡಿ.ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಚಾಮರಾಜನಗರ ಜಿಲ್ಲೆಯು ಒಂದಾಗಿದೆ ಎಂದರು. ಜಿಲ್ಲೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಇಂದಿಗೂ ಸಹ ಶಿಕ್ಷಣ ಮತ್ತು ಆರೋಗ್ಯ ಸೌಕರ್ಯಕ್ಕಾಗಿ ಸಂಪೂರ್ಣವಾಗಿ ಚಾಮರಾಜನಗರ ಜಿಲ್ಲೆಯು ಮೈಸೂರನ್ನು ಅವಲಂಬಿಸಿದೆ. ಇಲ್ಲಿ ಉದ್ಯೋಗ ಸೃಷ್ಟಿಯು ಸಹ ಅತ್ಯಂತ ಕಡಿಮೆ ಇದೆ ಎಂದರು.ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು ಪಿಯುಸಿ ಮತ್ತು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಇಂದಿಗೂ ಹಿಂದುಳಿದಿದೆ. ಉನ್ನತ ಮತ್ತು ತಾಂತ್ರಿಕ ಶಿಕ್ಷಣವಂತೂ ಅತ್ಯಂತ ದುರ್ಬಲವಾಗಿವೆ. ವಿಶ್ವವಿದ್ಯಾನಿಲಯಕ್ಕೆ ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಹಾಗೂ ಅಗತ್ಯ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು ಎಂದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಎಲ್ಲಾ ವಿದ್ಯಾಲಯಗಳಿಗೆ ತಕ್ಷಣ ಕಾಯಂ ಬೋಧಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಏಕೈಕ ಇಂಜಿನಿಯರಿಂಗ್ ಕಾಲೇಜಿಗೆ ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡಿ ಉನ್ನತೀಕರಿಸಬೇಕು ಎಂದರು.
ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಯುಜಿಡಿ ಸಂಪರ್ಕಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ರು. ಒದಗಿಸಬೇಕು ಎಂದರು.ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಿಸಿ ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಬೇಕು, ಉತ್ತಮ ಉದ್ಯಾನವನಗಳನ್ನು ಸ್ಥಳೀಯ ಸಂಸ್ಥೆಗಳು ಮತ್ತು ತೋಟಗಾರಿಕಾ ಇಲಾಖೆಗಳ ಸಹಯೋಗದಿಂದ ನಿರ್ಮಿಸಿ ನಿರ್ವಹಿಸಬೇಕು. ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ರೆಸಾರ್ಟ್ಗಳನ್ನು ಮುಚ್ಚಿಸಬೇಕು. ಇಲ್ಲವೇ ಸಕ್ರಮಗೊಳಿಸಿ ರಾಜಧನ ವಸೂಲಿ ಮಾಡಿ ಆ ಹಣವನ್ನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಳಸಬೇಕು. ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರವನ್ನು ರೂಪಿಸಬೇಕು ಎಂದರು.
ಕೊಳ್ಳೇಗಾಲ ತಾಲೂಕಿನ ಹಳೆ ಹಂಪಾಪುರ, ದಾಸನಪುರ, ಮುಳ್ಳೂರು ಹಳೆ ಅಣಗಳ್ಳಿ ಮುಂತಾದ ಪ್ರದೇಶಗಳಲ್ಲಿ ಅಗತ್ಯವಿರುವ ಸೇತುವೆಗಳು, ಪ್ರವಾಹ ನಿಯಂತ್ರಿಸುವ ಕಾಲುವೆಗಳನ್ನು ನಿರ್ಮಿಸಬೇಕು. ದಾಸನಪುರ ಗ್ರಾಮದಲ್ಲಿ ೫೦ ರಿಂದ ೬೦ ಕಚ್ಚಾ ಮನೆಗಳ ಬದಲು ತಾರಸಿ ಮನೆಗಳನ್ನು ನಿರ್ಮಿಸಲು ಅಗತ್ಯವಿರುವ ಎಲ್ಲರಿಗೂ ಹಣಕಾಸಿನ ನೆರವು ನೀಡಬೇಕು. ಇಲ್ಲವೇ ಸರ್ಕಾರವೇ ಮನೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು. ಹಳೆಅಣಗಳ್ಳಿ ಗ್ರಾಮದಲ್ಲಿ ಪ್ರವಾಹ ನಿಯಂತ್ರಿಸಲು, ಕೊಳ್ಳೇಗಾಲ ಟೌನ್ ನಿಂದ ಹಳೆಹಣಗಳ್ಳಿ ಗ್ರಾಮದವರೆಗೆ ಇರುವ ಕುಪ್ಪಮ್ಮ ಕಾಲುವೆಯನ್ನು ಸಂಪೂರ್ಣ ಅಗಲೀಕರಿಸಿ ಮರು ನಿರ್ಮಾಣ ಮಾಡಬೇಕು. ಹಳೆಯ ಹಂಪಾಪುರ ಗ್ರಾಮದ ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ಹಾಗೆಯೇ ಮುಳ್ಳೂರಿನಲ್ಲಿ ಅಪೂರ್ಣವಾಗಿರುವ ತಡೆಗೋಡೆಯನ್ನು ಸಂಪೂರ್ಣ ನಿರ್ಮಿಸಬೇಕು. ಹಿಂದುಳಿದ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ ಸ್ಥಾಪಿಸಿದಂತೆ, ಚಾಮರಾಜನಗರ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಅದಕ್ಕಾಗಿ ೩೭೧(ಜೆ) ರೂಪಿಸಿದಂತೆ ಚಾಮರಾಜನಗರಕ್ಕೂ ವಿಶೇಷ ಸೌಲಭ್ಯ ಕಲ್ಪಿಸುವ ತಿದ್ದುಪಡಿಯನ್ನು ತರಬೇಕು. ಈ ಜಿಲ್ಲೆಯ ಜನರಿಗೆ ಪ್ರತ್ಯೇಕ ನೇಮಕಾತಿಗಾಗಿ ಮೀಸಲಾತಿ ಸೌಲಭ್ಯವನ್ನು ಸೌಲಭ್ಯ ಒದಗಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರಣಿ ಕಾರ್ಯದರ್ಶಿ ಎನ್. ನಾಗಯ್ಯ, ರಾಜ್ಯ ಕಾರಿಣಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾಧ್ಯಕ್ಷ ಬ.ಮ. ಕೃಷ್ನಮೂರ್ತಿ, ವಕೀಲ ಪುಟ್ಟಸ್ವಾಮಿ, ಅಭಿ ಅರಳಿಪುರ, ಸಿದ್ದರಾಜು ಇದ್ದರು.