ಸಾರಾಂಶ
ಕನ್ನಡ ಪ್ರಭ ವಾರ್ತೆ ಬಾಗಲಕೋಟೆಸ್ಪರ್ಧಾತ್ಮಕ ಯುಗದ ವಿದ್ಯಾರ್ಥಿಗಳು ಗ್ರಂಥಾಲಯ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ನಿರಂತರ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ತಮ್ಮ ಸಾಧನೆಗೆ ಪರಿಶ್ರಮದ ಓದೇ ಮುಖ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕಗಳ ಸಹಯೋಗದಲ್ಲಿ ನವನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ನಡೆದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಜಿಲ್ಲಾ ಕಲಾವಿದರ, ಸಾಹಿತಿಗಳ, ಪತ್ರಕರ್ತರ ಮತ್ತು ಸಂಘಟಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ಕಲ್ಕತ್ತಾ ಐಐಟಿ ಪ್ರತಿಭಾವಂತ ವಿದ್ಯಾರ್ಥಿ ವಿಕ್ರಮ್ ಚಂದ್ರಕಾಂತ ಜೋಶಿ ಅವರು ಕನ್ನಡ ಭುವನೇಶ್ವರಿದೇವಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿನ ಜ್ಞಾನವನ್ನು ಮೊದಲು ಸ್ವಯಂ ಅರಿತುಕೊಂಡು, ಉತ್ತಮ ವೇದಿಕೆ ಸೃಷ್ಟಿಸಿಕೊಳ್ಳಬೇಕು. ಅಂತರ್ಜಾಲದಲ್ಲಿ ದೊರೆಯುವ ಓದಿನ ಪರಿಕರಗಳನ್ನು ಸರಿಯಾಗಿ ಸಂಗ್ರಹಿಸಿಕೊಂಡು, ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ತಾವು ಶಿಸ್ತುಬದ್ಧವಾಗಿ ಓದುವುದರಿಂದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸುಲಭವಾಗುತ್ತದೆ ಎಂದು ಹೇಳಿದರು.ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಅವರು ಅಭಿನಂದನಾ ನುಡಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಮತ್ತು ಕಜಾಪ ಜಿಲ್ಲಾಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರದಿಂದ ಅವರಲ್ಲಿ ಓದುವ ಅಭಿರುಚಿ ಹೆಚ್ಚಾಗಿ, ಸಾಧನೆ ಮಾಡುವ ಆಸಕ್ತಿ ಬೆಳೆಯುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಆನಂದ ದಲಬಂಜನ ಅವರು ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರಿಂದ ಅವರ ವ್ಯಾಸಂಗಕ್ಕೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.ಸಾಹಿತಿಗಳಾದ ಮಲ್ಲಿಕಾರ್ಜುನ್ ಶೆಲ್ಲಿಕೇರಿ ಅವರು ಮಾತನಾಡಿ, ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜವಾಬ್ದಾರಿ ಹೆಚ್ಚುತ್ತದೆ ಎಂದರು.ಸಮಾರಂಭದಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಕಜಾಪ ಪ್ರಧಾನ ಕಾರ್ಯದರ್ಶಿ ಸಿ.ಎನ್.ಬಾಳಕ್ಕನವರ, ಕೋಶಾಧ್ಯಕ್ಷ ಆರ್.ಸಿ.ಚಿತ್ತವಾಡಿಗಿ, ಕಸಾಪ ತಾಲೂಕ ಅಧ್ಯಕ್ಷರಾದ ಪಾಂಡುರಂಗ ಸಣ್ಣಪ್ಪನವರ, ಡಾ.ಎಚ್.ಎಸ್.ಘಂಟಿ, ಮಲ್ಲಿಕಾರ್ಜುನ ಸಜ್ಜನ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಎಸ್.ನಾಗನೂರ, ಡಾ.ಗೀತಾ ದಾನಶೆಟ್ಟಿ, ವಿಜಯಶ್ರೀ ಮುರನಾಳ, ಮಾಧ್ಯಮ ಕಾರ್ಯದರ್ಶಿ ಪ್ರಕಾಶ ಗುಳೇದಗುಡ್ಡ, ಸಂಗಮೇಶ ಬಡಿಗೇರ, ಮಲ್ಲಿಕಾರ್ಜುನ ಪೂಜಾರ ಸೇರಿ ಕಸಾಪ ಮತ್ತು ಕಜಾಪ ಪದಾಧಿಕಾರಿಗಳು, ಸಾಹಿತಿಗಳಾದ ಡಾ.ಪ್ರಕಾಶ ಖಾಡೆ ಮತ್ತು ಕಲಾವಿದರು ಪಾಲ್ಗೊಂಡಿದ್ದರು.ಶಾಖಾಂಬರಿ ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥನೆ ಗೀತೆ ಹಾಡಿದರು. ಡಾ.ಸಿ.ಎಂ.ಜೋಶಿ ಸ್ವಾಗತಿಸಿದರು ಸಿ.ಎಸ್. ನಾಗನೂರ ಪ್ರಾಸ್ತಾವಿಕ ನುಡಿ ಹೇಳಿದರು, ಪಾಂಡುರಂಗ ಸಣ್ಣಪ್ಪನವರ ವಂದಿಸಿದರು ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.
----------------------------------ಕೋಟ್್‌ಎಲ್ಲಿ ದುಡುಮೆ ಇರುತ್ತೆ ಅಲ್ಲಿ ಸತ್ಯ ಇರುತ್ತೆ, ಎಲ್ಲಿ ಸತ್ಯ ಇರುತ್ತೆ ಅಲ್ಲಿ ಸಾಧನೆ ಮಾಡುವ ಸಾರ್ಥಕತೆ ಛಲ ಬೆಳೆಯುತ್ತದೆ. ಕಾಲಕಾಲಕ್ಕೆ ಮಳೆ ಬೆಳೆ ಬರಲು ನಮ್ಮ ನೆಲದ ಜಾನಪದರು ಕಟ್ಟಿರುವ ಪದಗಳು ಮುಖ್ಯ. ಅದರಲ್ಲಿರುವ ಮೌಲ್ಯಗಳು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು. ಮೊಬೈಲ್‌ಗೆ ರೆಸ್ಟ್ ಕೊಟ್ಟು, ಮೆದುಳಿಗೆ ಕೆಲಸ ನೀಡುವ ಕೆಲಸ ಮಾಡಬೇಕಾಗಿದೆ.ಡಾ.ವೀರೇಶ ಬಡಿಗೇರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥ