ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಚಾಮರಾಜನಗರ ಲೋಕಸಭೆ ಮೀಸಲು ಕ್ಷೇತ್ರದ ಟಿಕೆಟ್ ಸ್ಥಳೀಯರಿಗೆ ನೀಡಬೇಕು. ಸಂಸದ ವಿ. ಶ್ರೀನಿವಾಸಪ್ರಸಾದ್ ಅಳಿಯ ಸೇರಿದಂತೆ ಕ್ಷೇತ್ರದ ಹೊರಗಿನವರಿಗೆ ಟಿಕೇಟ್ ನೀಡಬಾರದು ಎಂದು ಬಿಜೆಪಿ ಮುಖಂಡ ಹಾಗೂ ಆಕಾಂಕ್ಷಿ ವೆಂಕಟರಮಣಸ್ವಾಮಿ (ಪಾಪು) ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿರುವ ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿದರೆ ಸ್ಥಳೀಯ ಸಮಸ್ಯೆಗಳ ಕುರಿತು ಧ್ವನಿ ಎತ್ತಲಿದ್ದಾರೆ. ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಿದರೆ ಸಮಸ್ಯೆಯ ಕುರಿತು ಧ್ವನಿ ಎತ್ತುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಎನ್ ಮಹೇಶ್, ಮಾಜಿ ಶಾಸಕ ಬಾಲರಾಜು, ಮುಖಂಡರಾದ ಎಸ್. ಮಹದೇವಯ್ಯ, ಎಚ್.ಡಿ ಕೋಟೆ ಲಕ್ಷ್ಮಣ ಸೇರಿದಂತೆ 44 ವರ್ಷ ಬೆಂಕಿ ಮಹದೇವ್, ಶ್ರೀನಿವಾಸ್ ಪ್ರಸಾದ್, ವಿ.ಸೋಮಣ್ಣ , ಎನ್. ಮಹೇಶ್. ನಿರಂಜನ್ ಪರವಾಗಿ ಕೆಲಸ ಮಾಡಿರುವ ನಾನು ಕೂಡ ಆಕಾಂಕ್ಷಿಯಾಗಿದ್ದು, ಸ್ಥಳೀಯರಲ್ಲಿ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಸಂಸದ ಶ್ರೀನಿವಾಸ್ ಪ್ರಸಾದ್ ಗೌರವಯುತವಾಗಿ ಸಂಸದರಾಗಿ ರಾಜಕೀಯ ನಿವೃತ್ತಿ ಪಡೆದು ಅವರ ಕುಟುಂಬದವರಲ್ಲಿ ಯಾರನ್ನು ಸಹ ಅಭ್ಯರ್ಥಿಯಾಗಿ ನಿಲ್ಲಿಸಬಾರದು. ಅವರ ಕುಟುಂಬದವರಿಗೆ ಟಿಕೆಟ್ ಕೇಳಿದರೆ ಕ್ಷೇತ್ರದಲ್ಲಿ ಅವರು ಗಳಿಸಿರುವ ಗೌರವ ಹೆಸರು ಎಲ್ಲವನ್ನು ಕಳೆದುಕೊಳ್ಳಲಿದ್ದಾರೆ ಎಂದರು. ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಪರ ಲಾಬಿ ಮಾಡುವುದಿಲ್ಲ, ಅಲ್ಲದೇ ಹರ್ಷವರ್ಧನ್ ಸ್ಥಳೀಯರಲ್ಲ ನಂಜನಗೂಡಿಗೂ ಅವರಿಗೂ ಸಂಬಂಧವಿಲ್ಲ. ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಕಷ್ಟಗಳಲ್ಲಿ ನಾನು ಭಾಗಿಯಾಗಿದ್ದೇನೆ. ಅವರು ನನ್ನ ಪರವಾಗಿ ಟಿಕೆಟ್ ಕೇಳಬೇಕಿದೆ. ಯಾವುದೇ ಕಾರಣಕ್ಕೂ ಅವರ ಫ್ಯಾಮಿಲಿ ಪರವಾಗಿ ಟಿಕೆಟ್ ಕೇಳುವುದಿಲ್ಲ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಸವನಪುರ ರಾಜಶೇಖರ್, ಲಿಂಗರಾಜು, ಜಿ.ಎಂ. ಶಂಕರ್, ಪರಶಿವನಾಯಕ, ಶಿವಕುಮಾರ್, ಅಸ್ಲಾಂ ಇದ್ದರು.