ಕೆಆರ್‌ಎಸ್‌ ಬಳಿ ‘ಟ್ರಯಲ್‌ ಬ್ಲಾಸ್ಟ್‌’ಗೆ ರೈತರಿಂದ ಭಾರೀ ವಿರೋಧ..!

| Published : Feb 20 2024, 01:49 AM IST

ಸಾರಾಂಶ

ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವಂತೆ ತಿಳಿಸಿದೆ. ಆರು ತಿಂಗಳೊಳಗೆ ಟ್ರಯಲ್‌ ಬ್ಲಾಸ್ಟ್‌ ನಡೆಸಿ ವರದಿ ನೀಡುವಂತೆ ಕೇಳಿದೆ. ಹಾಗಾಗಿ ನಿಮ್ಮೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆದಿದ್ದೇವೆ. ನಿಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಿನಾಂಕ ನಿಗದಿಪಡಿಸುವುದಾಗಿ ಡೀಸಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಜಲಾಶಯದ ಸಮೀಪ ಪರೀಕ್ಷಾರ್ಥ ಸ್ಫೋಟ (ಟ್ರಯಲ್‌ ಬ್ಲಾಸ್ಟ್‌) ನಡೆಸಲು ಮೈಸೂರು ಮಹಾರಾಣಿ ಪ್ರಮೋದಾ ದೇವಿ ಸೇರಿದಂತೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ರೈತಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷಾರ್ಥ ಸ್ಫೋಟ ನಡೆಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆಂದು ಹೇಳಲಾಗಿದೆ.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವಂತೆ ತಿಳಿಸಿದೆ. ಆರು ತಿಂಗಳೊಳಗೆ ಟ್ರಯಲ್‌ ಬ್ಲಾಸ್ಟ್‌ ನಡೆಸಿ ವರದಿ ನೀಡುವಂತೆ ಕೇಳಿದೆ. ಹಾಗಾಗಿ ನಿಮ್ಮೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆದಿದ್ದೇವೆ. ನಿಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದರು ಎಂದು ಗೊತ್ತಾಗಿದೆ.

ಇದಕ್ಕೆ ರೈತ ಮುಖಂಡ ಪ್ರಸನ್ನ ಎನ್‌.ಗೌಡ ಪ್ರತಿಕ್ರಿಯಿಸಿ, ಕೃಷ್ಣರಾಜಸಾಗರ ಜಲಾಶಯದ ಉತ್ತರದಾಯಿತ್ವವನ್ನು ರೈತ ಸಂಘದವರು ಮಾತ್ರ ತೆಗೆದುಕೊಂಡಿಲ್ಲ. ಜಿಲ್ಲೆಯ ಏಳು ಶಾಸಕರು, ಮಂತ್ರಿಗಳು, ವಿಧಾನ ಪರಿಷತ್‌ ಸದಸ್ಯರೂ ಇದ್ದಾರೆ. ಅವರನ್ನೂ ಸಭೆಗೆ ಕರೆಯಿರಿ. ಅವರ ಅಭಿಪ್ರಾಯ ಏನೆಂಬುದನ್ನೂ ತಿಳಿದುಕೊಳ್ಳೋಣ. ಯಾರು ಪ್ರಾಯೋಗಿಕ ಸ್ಫೋಟದ ಪರವಾಗಿದ್ದಾರೆ. ಯಾರು ವಿರೋಧವಾಗಿದ್ದಾರೆ. ಅಣೆಕಟ್ಟು ಸುರಕ್ಷತೆ ಬಗ್ಗೆ ಯಾರಿಗೆ ಎಷ್ಟು ಕಾಳಜಿ ಇದೆ ಎನ್ನುವುದು ಜನರಿಗೂ ಗೊತ್ತಾಗುತ್ತದೆ ಎಂದು ಹೇಳಿದ್ದಾಗಿ ತಿಳಿದುಬಂದಿದೆ.

ನಾವು ಜನಪ್ರತಿನಿಧಿಗಳನ್ನು ಸಭೆಗೆ ಕರೆಯಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದಾಗ, ನಾವೂ ಸಹ ಪರೀಕ್ಷಾರ್ಥ ಸ್ಫೋಟಕ್ಕೆ ಒಪ್ಪುವುದಿಲ್ಲ. ಜನಪ್ರತಿನಿಧಿಗಳನ್ನೂ ಕರೆದು ಅವರ ಸಲಹೆ-ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದು ಅಗತ್ಯವಿದೆ. ಜೊತೆಗೆ ಕೆಆರ್‌ಎಸ್‌ ನೀರಿನ ಮೇಲೆ ಬೆಂಗಳೂರಿನ ಜನರೂ ಅವಲಂಬಿತರಾಗಿದ್ದಾರೆ. ಆ ಭಾಗದ ಜನರ ಅಭಿಪ್ರಾಯವನ್ನು ಪಡೆಯದೆ ನಮ್ಮಿಷ್ಟೇ ಜನರ ಅಭಿಪ್ರಾಯ ಪಡೆದು ಟ್ರಯಲ್‌ ಬ್ಲಾಸ್ಟ್‌ ನಡೆಸುವುದರಲ್ಲಿ ಅರ್ಥವಿದೆಯಾ ಎಂದು ಪ್ರಶ್ನಿಸಿದರು ಎನ್ನಲಾಗಿದೆ.

ಜಿಲ್ಲಾಡಳಿತ ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಅಂಡ್‌ ಇಂಡಸ್ಟ್ರಿಯಲ್‌ ರೀಸರ್ಚ್‌ (ಸಿಎಸ್ಐಆರ್‌) ತಂಡದಿಂದ ಪರೀಕ್ಷಾರ್ಥ ಸ್ಫೋಟ ನಡೆಸುವುದಾಗಿ ಹೇಳುತ್ತಿದೆ. ಆದರೆ, ಪರೀಕ್ಷಾರ್ಥ ಸ್ಫೋಟಕ್ಕೆ ಅನುಸರಿಸುತ್ತಿರುವ ಮಾನದಂಡವೇನು. ಎಷ್ಟು ಅಡಿ ಆಳದಲ್ಲಿ ಸ್ಫೋಟ ನಡೆಸಲಾಗುತ್ತದೆ. ಒಮ್ಮೆ ಸಣ್ಣ ಪ್ರಮಾಣದಲ್ಲಿ ಸ್ಫೋಟ ನಡೆಸಿ ವರದಿ ಪಡೆದುಕೊಂಡು ಹೈಕೋರ್ಟ್‌ಗೆ ಸಲ್ಲಿಸಿ ನ್ಯಾಯಾಲಯದ ಅನುಮತಿ ಪಡೆಯುವ ಸಂಚು ಅಡಗಿದೆಯಾ ಎಂದು ಪ್ರಶ್ನಿಸಿದ್ದಾಗಿ ತಿಳಿದುಬಂದಿದೆ.

ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ಮಾತನಾಡಿ, ಕೆಆರ್‌ಎಸ್‌ ಸುತ್ತಮುತ್ತ ವನ್ಯಜೀವಿ ವಲಯ, ಅರಣ್ಯ, ಪ್ರಾಕೃತಿಕ ಸಂಪತ್ತು ಇದೆ. ಮೇಲುಕೋಟೆ ವನ್ಯಜೀವಿ ವಲಯ, ರಂಗನತಿಟ್ಟು ಪಕ್ಷಿಧಾಮದಿಂದ 10 ಕಿ.ಮೀ. ದೂರದಲ್ಲಿ ಗಣಿಗಾರಿಕೆಗೆ ನಿಯಮಬಾಹೀರ ಅವಕಾಶ ನೀಡಲಾಗಿದೆ. ಬೇಬಿ ಬೆಟ್ಟ ಕಾವಲ್‌ ಒತ್ತುವರಿ ತೆರವಿಗೆ ಆದೇಶವಿದ್ದರೂ ಪಾಲನೆಯಾಗಿಲ್ಲ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆಸಲು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಿದೆ. ಪ್ರಾಕೃತಿಕ ಸಂಪತ್ತನ್ನು ಉಳಿಸುವುದರ ಮೇಲೆ ಆಸಕ್ತಿಯನ್ನೇ ತೋರದ ಜಿಲ್ಲಾಡಳಿತ, ಪರೀಕ್ಷಾರ್ಥ ಸ್ಫೋಟ ನಡೆಸುವುದಕ್ಕೆ ಹೆಚ್ಚಿನ ಮುತುವರ್ಜಿ, ಆಸಕ್ತಿ ತೋರುತ್ತಿರುವುದು ಎಷ್ಟರಮಟ್ಟಿಗೆ ಸರಿ. ಇದು ಗಣಿಗಾರಿಕೆ ನಡೆಸುವವರಿಗೆ ಅನುಕೂಲ ಮಾಡಿಕೊಡುವ ಸಂಚು ಅಡಗಿರುವಂತೆ ಕಂಡುಬರುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಗಣಿಧಣಿಗಳಿಗೆ ಮಣಿದಿರುವಂತೆ ಕಂಡುಬರುತ್ತಿದೆ. ಜನಪ್ರತಿನಿಧಿಗಳ ಸಭೆ ಕರೆಯದಿರುವುದನ್ನು ನೋಡಿದರೆ ಅವರೂ ಪರೋಕ್ಷವಾಗಿ ಟ್ರಯಲ್‌ ಬ್ಲಾಸ್ಟ್‌ ಬೆಂಬಲಕ್ಕೆ ನಿಂತಿರುವಂತೆ ಕಂಡುಬರುತ್ತಿದೆ. ನೂರು ವರ್ಷ ಹಳೆಯದಾಗಿರುವ ಅಣೆಕಟ್ಟೆಯನ್ನು ಸಂರಕ್ಷಣೆ ಮಾಡುವ ಇಚ್ಛಾಶಕ್ತಿಯನ್ನು ಪ್ರದರ್ಶಿಸದೆ ಪರೀಕ್ಷಾರ್ಥ ಸ್ಫೋಟಕ್ಕೆ ಸಜ್ಜಾಗುತ್ತಿರುವುದು ದೊಡ್ಡ ದುರಂತ ಎಂದು ಹೇಳಿದರು ಎನ್ನಲಾಗಿದೆ.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂಗೌಡ ಮಾತನಾಡಿ, ನಾವು ಮೊದಲಿನಿಂದಲೂ ಟ್ರಯಲ್‌ ಬ್ಲಾಸ್ಟ್‌ಗೆ ಸಂಪೂರ್ಣ ವಿರುದ್ಧವಾಗಿದ್ದೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಒಮ್ಮೆ ರೈತರ ವಿರೋಧದ ನಡುವೆಯೂ ಟ್ರಯಲ್‌ ಬ್ಲಾಸ್ಟ್‌ ನಡೆಸಲು ಮುಂದಾದರೆ ಮತ್ತೆ ಗೋ-ಬ್ಯಾಕ್‌ ಚಳವಳಿ ನಡೆಸಬೇಕಾಗುತ್ತದೆ. ಚಳವಳಿಗೆ ಉಗ್ರ ಸ್ವರೂಪ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಬಂದಿದ್ದಾರೆಂದು ಗೊತ್ತಾಗಿದೆ.

ಸಭೆಯಲ್ಲಿ ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌, ರೈತಸಂಘದ ಲಿಂಗಪ್ಪಾಜಿ, ಕೆನ್ನಾಳು ನಾಗರಾಜು, ಹುಳ್ಳೇನಹಳ್ಳಿ ರಾಣಿ, ಬೊಮ್ಮೇಗೌಡ, ಶಿವರಾಮೇಗೌಡ, ಮಂಜುನಾಥ್‌, ಕೃಷ್ಣ ಸೇರಿದಂತೆ ಇತರರಿದ್ದರು.

ಟ್ರಯಲ್‌ ಬ್ಲಾಸ್ಟ್‌ಗೆ ಪ್ರಮೋದಾ ದೇವಿ ಒಡೆಯರ್‌ ಆಕ್ಷೇಪಣೆ

ಕೆಆರ್‌ಎಸ್‌ ಅಣೆಕಟ್ಟು ಸುತ್ತಲಿನ ಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವುದಕ್ಕೆ ಮೈಸೂರು ಮಹಾರಾಣಿ ಪ್ರಮೋದಾದೇವಿ ಒಡೆಯರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ವಕೀಲರ ಮೂಲಕ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿರುವ ಅವರು, ಬೇಬಿ ಬೆಟ್ಟ ಸರ್ವೆ ನಂ.1ರಲ್ಲಿರುವ 1623 ಎಕರೆ 7 ಗುಂಟೆ ಆಸ್ತಿ ಮೈಸೂರು ಮಹಾರಾಜರಿಗೆ ಸೇರಿದ ಖಾಸಗಿ ಆಸ್ತಿ. ಈ ಸಂಬಂಧ ಹೈಕೋರ್ಟ್‌ನಲ್ಲಿ ಮೊಕದ್ದಮೆಯನ್ನೂ ಹೂಡಲಾಗಿದೆ. ನನಗೆ ಸೇರಿದ ಖಾಸಗಿ ಆಸ್ತಿಯಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆಸುವುದಕ್ಕೆ ನನ್ನ ವಿರೋಧವಿದೆ. ಜೊತೆಗೆ ಇದು ಸುಪ್ರೀಂ ಕೋರ್ಟ್‌ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಕೆಆರ್‌ಎಸ್ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸದಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ಕೆಆರ್‌ಎಸ್‌ ಸಮೀಪ ಪ್ರಾಯೋಗಿಕ ಸ್ಫೋಟ ನಡೆಸುವಂತೆ ತಿಳಿಸಿದೆ. ಅದರಂತೆ ಕಾವೇರಿ ನೀರಾವರಿ ನಿಗಮದವರ ಮೂಲಕ ಪರೀಕ್ಷಾರ್ಥ ಸ್ಫೋಟಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ತಜ್ಞರ ತಂಡ ಅಣೆಕಟ್ಟೆಗೆ ಆಗಮಿಸಿ ಪರೀಕ್ಷಾರ್ಥ ಸ್ಫೋಟಕ್ಕೆ ತಯಾರಿ ಮಾಡಿಕೊಳ್ಳಲಿದೆ. ಈ ಸಂಬಂಧ ರೈತರ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆದಿದ್ದೆವು. ಆದರೆ, ರೈತ ಮುಖಂಡರು ಒಪ್ಪಿಗೆ ಸೂಚಿಸಿಲ್ಲ. ನ್ಯಾಯಾಲಯದ ಆದೇಶ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ