ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸೂಕ್ತ ಉದ್ಯೋಗವನ್ನು ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಬದುಕಲು ಹಾಗೂ ಜೀವನ ನಿರ್ವಹಣೆಗೆ ತುಂಬಾ ಕಷ್ಟಪಡುತ್ತಿರುವ ತಮಗೆ ದಯಾಮರಣವನ್ನು ಕಲ್ಪಿಸಿ ಮುಕ್ತಿ ಕೊಡಿಸಬೇಕೆಂದು ರಾಷ್ಟ್ರಪತಿಯವರಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬದ ಸದಸ್ಯರು ಕಂಬನಿ ತುಂಬಿ ಮನವಿ ಮಾಡಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬದ ಸದಸ್ಯರಾದ ನಾಗರತ್ನ, ಸವಿತಾ, ಸೌಮ್ಯ, ನಂದಿನಿ, ಬಿ.ಪುಷ್ಟ ತಮ್ಮ ಪತಿಯಂದಿರನ್ನು ಕಳೆದುಕೊಂಡು, ತುಂಬಿ ಬಂದ ಕಣ್ಣೀರನ್ನು ತಡೆದುಕೊಂಡು ಮಾತನಾಡಿದರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ೨೦೨೧ ಮೇ ೨ರಂದು ನಡೆದ ಆಕ್ಸಿಜನ್ ದುರಂತದಲ್ಲಿ ಕುಟುಂಬದ ಆಧಾರ ಸ್ತಂಭವಾಗಿದ್ದ ಯಜಮಾನನನ್ನು ಕಳೆದುಕೊಂಡಿದ್ದೇವೆ. ಅಂದಿನ ಬಿಜೆಪಿ ಸರ್ಕಾರ ಯಾವುದೇ ಪರಿಹಾರದ ಮಾತಿರಲಿ, ನೊಂದ ಕುಟುಂಬಗಳಿಗೆ ಸಾಂತ್ವನವನ್ನು ಹೇಳಲಿಲ್ಲ ಎಂದರು.ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷದ ಡಿ.ಕೆ.ಶಿವಕುಮಾರ್, ದಿ. ಧ್ರುವನಾರಾಯಣ ಸಾಹೇಬರ ನೇತೃತ್ವದಲ್ಲಿ ನೊಂದ ಕುಟುಂಬಗಳನ್ನು ಭೇಟಿ ಮಾಡಿ ೩೬ ಕುಟುಂಬಗಳಿಗೆ ಕೆ.ಪಿ.ಸಿ.ಸಿ. ವತಿಯಿಂದ ಒಂದು ಲಕ್ಷ ರು.ಗಳ ಪರಿಹಾರವನ್ನು ವಿತರಿಸಿ ಸಾಂತ್ವನ ಹೇಳಿದರು. ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸೂಕ್ತ ಸರ್ಕಾರಿ ನೌಕರಿಯನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರೂ ಯಾವುದೇ ರೀತಿಯ ಸರ್ಕಾರಿ ಉದ್ಯೋಗವನ್ನು ನೀಡಿಲ್ಲ ಎಂದರು.ಜಿಲ್ಲಾಡಳಿತ ಕಳೆದ ಫೆಬ್ರವರಿ ತಿಂಗಳಿನಲ್ಲಿ ೩೬ ಸಂತ್ರಸ್ತ ಕುಟುಂಬಗಳ ಪೈಕಿ, ಕೇವಲ 9 ಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ತಾತ್ಕಾಲಿಕ ಉದ್ಯೋಗಕ್ಕೆ ಯಾವುದೇ ಭದ್ರತೆ ಇಲ್ಲದೆ ಗುತ್ತಿಗೆ ಆಧಾರದಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಯಳಂದೂರು, ಕೊಳ್ಳೇಗಾಲ ತಾಲೂಕು ಕಚೇರಿಗಳಲ್ಲಿ ಡಿ.ಗ್ರೂಪ್ ನೌಕರಿಯನ್ನು ನೀಡಿ ಪ್ರಾಥಮಿಕವಾಗಿ ಒಂದು ತಿಂಗಳ ಸಂಬಳ ವಿತರಿಸಿ, ತದನಂತರ ೪ ತಿಂಗಳಿಗೆ 1 ತಿಂಗಳ ಸಂಬಳವನ್ನು ನೀಡಿದ್ದು ಇನ್ನು ೨ ತಿಂಗಳ ಸಂಬಳ ನೀಡಿಲ್ಲ, ಈ ಗುತ್ತಿಗೆ ಆಧಾರದ ಕೆಲಸಕ್ಕೆ ಯಾವುದೇ ಆಧಾರವಿಲ್ಲ ಎಂದರು. ಜುಲೈ ತಿಂಗಳಿನಿಂದ ಸಿಮ್ಸ್‌ನಲ್ಲಿ ಎಲ್ಲಾ ಸಂತ್ರಸ್ತ ಕುಟುಂಬಗಳಿಗೂ ಉದ್ಯೋಗ ನೀಡುತ್ತಾರೆ ಎಂದು ಹೇಳಿ ಕೈ ತೊಳೆದು ಕೊಂಡಿದ್ದಾರೆ. ಆದರೆ ಸಿಮ್ಸ್‌ನಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಯಾವುದೇ ಉದ್ಯೋಗಳು ಲಭ್ಯವಿಲ್ಲ ಎಂದು ಸಿಮ್ಸ್‌ನ ಡೀನ್ ತಿಳಿಸಿದ್ದು, ಈ ಆಸ್ಪತ್ರೆಯಲ್ಲಿ ನಮಗೆ ಉದ್ಯೋಗ ನೀಡಿದರೆ ನಾವು ಕರ್ತವ್ಯ ನಿರ್ವಹಿಸಲು ನಾವು ತಯಾರಿಲ್ಲ, ನಮ್ಮ ವಿದ್ಯಾರ್ಹತೆಗೆ ತಕ್ಕಂತೆ ನಮಗೆ ಉದ್ಯೋಗ ನೀಡಲಿ ಎಂದು ಮನವಿ ಮಾಡಿದರು.ಘಟನೆ ನಡೆದ ದಿನದಿಂದ ಇಲ್ಲಿಯವರೆಗೂ ಮುಖ್ಯಮಂತ್ರಿಗಳನ್ನು ಮೂರು ಬಾರಿ ಭೇಟಿ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಚಾಮರಾಜನಗರ ಕ್ಷೇತ್ರದ ಎಲ್ಲಾ ಶಾಸಕರನ್ನು ಭೇಟಿ ಮಾಡಿ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ಕೊಡಿಸಿಕೊಡುವಂತೆ, ಒತ್ತಾಯಿಸಿ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಬೆಳಗಾವಿ ಅಧಿವೇಶನದಲ್ಲಿ, ಜಿಲ್ಲಾ ಕೆ.ಡಿ.ಪಿ. ಸಭೆಯಲ್ಲಿ ಹಾಗೆಯೇ ಕೆ.ಪಿ.ಸಿ.ಸಿ. ಸಭೆಯಲ್ಲಿ ಸೂಕ್ತ ನ್ಯಾಯಕ್ಕಾಗಿ ಒತ್ತಾಯಿಸುತ್ತಾ ಬಂದಿರುತ್ತಾರೆ. ಇವರನ್ನು ಹೊರತುಪಡಿಸಿ ಕ್ಷೇತ್ರದ ಇತರೆ ಶಾಸಕರು ನಮ್ಮಗಳ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ ಎಂದರು. ಎಸ್.ಡಿ.ಪಿ.ಐ. ಪಕ್ಷದ ನಾಯಕರು ಧ್ವನಿ ಎತ್ತುವುದರ ಜೊತೆ ಸದಾ ನಮ್ಮ ಬೆಂಬಲವಾಗಿ ನಿಂತಿದ್ದಾರೆ. ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡ ಹಲವಾರು ಕುಟುಂಬಗಳು ಇಂದಿಗೂ ಸಹ ತಂದೆ-ತಾಯಿ, ಅತ್ತೆ-ಮಾವ ಇವರ ಆಶ್ರಯದಲ್ಲಿ ಬದುಕುತ್ತಿದ್ದೇವೆ. ಜೀವನ ನಿರ್ವಹಣೆಗಾಗಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಂಬಾ ತೊಂದರೆ ಉಂಟಾಗಿದೆ. ಹಾಗಾಗಿ ನಮ್ಮ ಕುಟುಂಬಗಳ ನಿರ್ವಹಣೆಗಾಗಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಭವಿಷ್ಯಕ್ಕಾಗಿ ನಮ್ಮಗಳಿಗೆ ಸೂಕ್ತ ಉದ್ಯೋಗದ ಅವಶ್ಯಕತೆ ಇರುತ್ತದೆ. ಆದರೆ ನಮ್ಮಗಳಿಗೆ ಯಾವುದೇ ರೀತಿಯ ಸೂಕ್ತ ಉದ್ಯೋಗವನ್ನು ದೊರಕಿಸಿಕೊಡದೇ ಇಕ್ಕಟ್ಟಿನಲ್ಲಿ ಸಿಲುಕಿಸಿದ್ದಾರೆ. ಆದುದರಿಂದ ಗೌರವಾನ್ವಿತ ರಾಷ್ಟ್ರಪತಿಗಳು ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಸೂಕ್ತ ಉದ್ಯೋಗ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಇಲ್ಲ ನಮಗೆ ದಯಾಮರಣ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.