ನೀರು ಕೊಡಿ ಇಲ್ಲ ವಿಷ ಕೊಡಿ

| Published : May 01 2024, 01:19 AM IST

ಸಾರಾಂಶ

ಕುಡಿಯಲು ಹಾಗೂ ದಿನನಿತ್ಯದ ಬಳಕೆಗೂ ನೀರಿಲ್ಲ, ಇದರಿಂದ ಬಹಳ ತೊಂದರೆಯಾಗಿದೆ. ನೀರು ಕೊಡಿ ಇಲ್ಲ ವಿಷ ಕೊಡಿ ಇಲ್ಲದಿದ್ದರೆ ಗ್ರಾಮಬಿಟ್ಟು ನೀರು ಎಲ್ಲಿ ಸಿಗುತ್ತದೆ ಅಲ್ಲಿಗೆ ಕಳಿಸಿಕೊಡಿ ಎಂದು ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿ ಮಹಿಳೆಯರು ಕಣ್ಣೀರಿಟ್ಟರು.

ಕನ್ನಡಪ್ರಭ ವಾರ್ತೆ ಹನೂರು

ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದು ಕೂಡಲೇ ಬಗೆಹರಿಸುವಂತೆ ನೀರಿಗಾಗಿ ಆಗ್ರಹಿಸಿ ತಾಲೂಕಿನ ಮೈಸೂರಪ್ಪನದೊಡ್ಡಿ ಗ್ರಾಮದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು.

ಮೈಸೂರಪ್ಪನ ದೊಡ್ಡಿ ಗ್ರಾಮದಲ್ಲಿ ನೀರಿನ ತೊಂಬೆ ಮುಂಭಾಗ ಖಾಲಿ ಬಿಂದಿಗೆಗಳನ್ನು ಹಿಡಿದು ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದು ಬಗೆಹರಿಸುವಂತೆ ಒತ್ತಾಯಿಸಿದರು.

ಮೈಸೂರಪ್ಪನ ದೊಡ್ಡಿ ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಪ್ರಸ್ತುತ ಇರುವ ಬೋರ್‌ವೆಲ್‌ನಲ್ಲಿ ಅಂತರ್ಜಲ ಕುಸಿತಗೊಂಡು ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಕಳೆದ ಎರಡು ತಿಂಗಳಿಂದ ಬಹಳ ತೊಂದರೆಯಾಗುತ್ತಿದೆ. ಹೊಸ ಬೋರ್‌ವೆಲ್ ತೆಗೆಸಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡರು. ಗ್ರಾಮದಲ್ಲಿ ಉಲ್ಬಣಿಸಿರುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬೇಸಿಗೆಯ ಸಂದರ್ಭದಲ್ಲಿ ಪಿಜಿ ಪಾಳ್ಯ ಗ್ರಾಪಂ ವ್ಯಾಪ್ತಿಯಲ್ಲಿರುವ ಸಮಸ್ತ ಜನತೆಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರನ್ನು ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ಪಿಡಿಒ ನಂಜುಂಡಸ್ವಾಮಿ ತಿಳಿಸಿದ್ದಾರೆ.