ಹೆಣ್ಣಿಗೆ ತನ್ನ ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ನೀಡಿ

| Published : Mar 12 2025, 12:53 AM IST

ಹೆಣ್ಣಿಗೆ ತನ್ನ ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ: ಮಹಿಳೆಯರು ಮೊದಲು ತಮ್ಮನ್ನು ತಾವು ಗೌರವಿಸಿಕೊಳ್ಳುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಪ್ರಸ್ತುತ ಮಹಿಳೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ಪಡೆದುಕೊಂಡಿದ್ದಾಳೆ ಎಂದು ಶಿವಮೊಗ್ಗ ಕಾರಗೃಹ ಸಹಾಯಕ ಅಧೀಕ್ಷಕಿ ಪಿ.ಭವ್ಯ ಹೇಳಿದರು.

ಭದ್ರಾವತಿ: ಮಹಿಳೆಯರು ಮೊದಲು ತಮ್ಮನ್ನು ತಾವು ಗೌರವಿಸಿಕೊಳ್ಳುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಪ್ರಸ್ತುತ ಮಹಿಳೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ಪಡೆದುಕೊಂಡಿದ್ದಾಳೆ ಎಂದು ಶಿವಮೊಗ್ಗ ಕಾರಗೃಹ ಸಹಾಯಕ ಅಧೀಕ್ಷಕಿ ಪಿ.ಭವ್ಯ ಹೇಳಿದರು.

ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಒಂದು ಕಾಲದಲ್ಲಿ ಮಹಿಳೆ ಮನೆಯ ೪ ಗೋಡೆಗಳ ನಡುವೆ ಸೀಮಿತವಾಗಿದ್ದಳು. ಆದರೆ ಪ್ರಸ್ತುತ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಪುರುಷನ ಸಮಾನತೆ ಎದುರು ನೋಡುತ್ತಿದ್ದಾಳೆ. ಸಮಾಜದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರನ್ನು ಸಮಾನವಾಗಿ ಕಾಣುವ ಮನಸ್ಥಿತಿ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಮನೆಗಳಲ್ಲಿ ಇಬ್ಬರಿಗೂ ಸಮಾನ ಅವಕಾಶಗಳನ್ನು ನೀಡಬೇಕು. ಹೆಣ್ಣು ಮಕ್ಕಳಿಗೆ ಇನ್ನೂ ಹೆಚ್ಚಿನ ಶಿಕ್ಷಣ ನೀಡಬೇಕು. ಆಕೆಗೆ ತನ್ನದೇ ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ನೀಡಬೇಕು ಎಂದರು. ಮಹಿಳೆ ಪ್ರಕೃತಿಯ ವಿಶೇಷ ಸೃಷ್ಟಿಯಾಗಿದ್ದು, ಮಹಿಳೆಯಿಂದ ಯಾವುದೂ ಅಸಾಧ್ಯವಲ್ಲ. ಆಕೆಯಲ್ಲಿ ಅದ್ಭುತ ಶಕ್ತಿ ಇದ್ದು, ಇದು ನಮ್ಮ ನಡುವೆಯೇ ಬಹಳಷ್ಟು ಬಾರಿ ಸಾಬೀತಾಗಿದೆ. ಆಕೆಯ ಸಾಧನೆಗೆ ಮತ್ತಷ್ಟು ಪ್ರಶಂಸೆ, ಪ್ರೋತ್ಸಾಹ ನಮ್ಮಿಂದ ಲಭಿಸಿದಾಗ ಇನ್ನೂ ಹೆಚ್ಚಿನ ಸಾಧನೆ ಮಾಡಲು ಆಕೆಗೆ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್, ಮಹಿಳೆಯರು ಎಲ್ಲಾ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸ ಬಲ್ಲರು. ಕುಟುಂಬದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಅಲ್ಲದೆ ಕುಟುಂಬ ನಿರ್ವಹಣೆ ಜೊತೆಗೆ ಸಮಾಜದ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಪುರುಷರಂತೆ ಯಾವುದರಲ್ಲೂ ಕಡಿಮೆ ಇಲ್ಲದಂತೆ ಮುನ್ನಡೆಯುತ್ತಿದ್ದು, ನಮ್ಮ ಇತಿಹಾಸದ ಪುಟದಲ್ಲಿ ಆನೇಕ ಸಾಧಕ ಮಹಿಳೆಯರಿದ್ದಾರೆ. ನಮಗೆ ಅವರು ಸ್ಫೂರ್ತಿದಾಯಕರಾಗಿದ್ದು, ಅವರ ದಾರಿಯಲ್ಲಿ ನಾವುಗಳು ಮುನ್ನಡೆಯಬೇಕು ಎಂದರು. ಇದೇ ವೇಳೆ ನಗರಸಭೆ ಪೌರಕಾರ್ಮಿಕರಾದ ಲಕ್ಷ್ಮಮ್ಮ ಸೋಮಣ್ಣ, ಪತ್ರಕರ್ತೆ ಆರ್.ಫಿಲೋಮಿನ ಅಂತೋಣಿ, ಡಿ.ಜಿ ಹಳ್ಳಿ ಆಶಾ ಕಾರ್ಯಕರ್ತೆ ರಾಜೇಶ್ವರಿ ನಂದೀಶ್ ಮತ್ತು ಹಳ್ಳಿಕೆರೆ-ಬಾರಂದೂರು ಅಂಗನವಾಡಿ ಕಾರ್ಯಕರ್ತೆ ಟಿ.ಮಂಜುಳ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಅಧ್ಯಕ್ಷೆ ನಾಗರತ್ನ ವಾಗೀಶ್ ಕೋಠಿ, ಪ್ರಶಸ್ತಿ ಸಂಸ್ಥಾಪಕಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ.ವಿಜಯದೇವಿ, ಸಮಾಜದ ಉಪಾಧ್ಯಕ್ಷೆ ವಿಜಯ ಜಗನ್ನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾಜದ ಗೌರವಾಧ್ಯಕ್ಷೆ ಆರ್.ಎಸ್.ಶೋಭಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಬಾರಿ ಲಾಟರಿ ಮೂಲಕ ಅದೃಷ್ಟ ಮಹಿಳೆಯಾಗಿ ನಾಗರತ್ನ ಕೋಠಿ ಆಯ್ಕೆಯಾದರು.