ಮಗುವಿಗೆ ದಡಾರ ರುಬೆಲ್ಲಾ ಲಸಿಕೆ ತಪ್ಪದೇ ಹಾಕಿಸಿ: ಡಾ.ಹನುಮಂತಪ್ಪ

| Published : Feb 02 2025, 11:46 PM IST

ಮಗುವಿಗೆ ದಡಾರ ರುಬೆಲ್ಲಾ ಲಸಿಕೆ ತಪ್ಪದೇ ಹಾಕಿಸಿ: ಡಾ.ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಗುವಿಗೆ ಒಂಬತ್ತು ತಿಂಗಳು ತುಂಬಿದ ನಂತರ ದಡಾರ ರುಬೆಲ್ಲಾ ಲಸಿಕೆ ತಪ್ಪದೇ ಹಾಕಿಸಬೇಕು.

ಬಳ್ಳಾರಿ: ಮಗುವಿಗೆ ಒಂಬತ್ತು ತಿಂಗಳು ತುಂಬಿದ ನಂತರ ದಡಾರ ರುಬೆಲ್ಲಾ ಲಸಿಕೆ ತಪ್ಪದೇ ಹಾಕಿಸಬೇಕು. ದಡಾರದಿಂದಾಗುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ ಹೇಳಿದರು.

ಜಿಲ್ಲಾಡಳಿತ, ಜಿಪಂ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಗುಗ್ಗರಹಟ್ಟಿ ವ್ಯಾಪ್ತಿಯ ಕಾಕರ್ಲತೋಟದ ಹನುಮಾನ ನಗರ, ವೆಂಕಟಮ್ಮ ಕಾಲೋನಿ, ಗುರಪ್ಪ ತೋಟ ಬಡಾವಣೆಗಳಲ್ಲಿ ದಡಾರ ರುಬೆಲ್ಲಾ ಲಸಿಕೆ ಹಾಕಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಪ್ಪು ನಂಬಿಕೆಗಳಿಂದ ಲಸಿಕೆ ಪಡೆಯದ ಕುಟುಂಬಗಳ ಪಾಲಕರಿಗೆ ಜಾಗೃತಿ ನೀಡಿಲಾಗುತ್ತಿದೆ. ವಲಸೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಹೆರಿಗೆ ನಂತರದಲ್ಲಿ ನವಜಾತ ಶಿಶುವಿಗೆ 12 ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಯಸ್ಸಿಗನುಸಾರವಾಗಿ ನೀಡುವ ಲಸಿಕೆಗಳನ್ನು ಹಾಕಲಾಗುತ್ತಿದ್ದು, ಪ್ರತಿ ಗುರುವಾರ ನಿಮ್ಮ ಹತ್ತಿರದ ನಗರ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಲಸಿಕೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ.ಆರ್.ಎಸ್. ಶ್ರೀಧರ ಮಾತನಾಡಿ, ನೆರೆಯ ದೇಶಗಳಾದ ಪಾಕಿಸ್ತಾನ, ಅಪಘಾನಿಸ್ತಾನಗಳಲ್ಲಿ ಇಂದಿಗೂ ಪೊಲಿಯೊ ಪ್ರಕರಣ ಕಂಡು ಬರುತ್ತಿವೆ. ಇಂದು ಜನರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ದುಡಿಮೆ, ಪ್ರವಾಸ, ವ್ಯಾಪಾರ ಮುಂತಾದ ಉದ್ದೇಶಗಳಿಗೆ ಹೆಚ್ಚು ಪ್ರಯಾಣ ಮಾಡುತ್ತಿದ್ದು, ಈ ದಿಶೆಯಲ್ಲಿ ಎಲ್ಲ ಲಸಿಕೆಗಳನ್ನು ತಪ್ಪದೇ ಹಾಕಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಡಾ.ಕಾಶೀಪ್ರಸಾದ್, ಡಾ.ಶಗುಪ್ತಾ ಶಾಹೀನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಐಎಫ್‌ವಿ ಕೋಟೇಶ್ವರ ರಾವ್, ಬಿಎಚ್‌ಇಒ ಶಾಂತಮ್ಮ, ತಾಲೂಕು ಆಶಾ ಮೇಲ್ವಿಚಾರಕಿ ನೇತ್ರಾ ಸೇರಿದಂತೆ ಆಶಾ ಕಾರ್ಯಕರ್ತೆಯರು ತಾಯಂದಿರು ಉಪಸ್ಥಿತರಿದ್ದರು.

ಬಳ್ಳಾರಿಯ ಗುಗ್ಗರಹಟ್ಟಿ ಪ್ರದೇಶದಲ್ಲಿ ದಡಾರ ರುಬೆಲ್ಲಾ ಲಸಿಕೆ ಮಹತ್ವ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಿದರು.