ನಿಮ್ಮ ಋಣ ತೀರಿಸಲು ಸ್ವಲ್ಪ ಸಮಯ ಕೊಡಿ: ಕುಮಾರಸ್ವಾಮಿ

| Published : Jul 22 2024, 01:22 AM IST

ಸಾರಾಂಶ

ಹಣ ಬಲದ ನಡುವೆ ಪ್ರೀತಿ ದೊಡ್ಡದಾಗಿ, ಪಕ್ಷಾತೀತವಾಗಿ ತನ್ನ ಗೆಲ್ಲಿಸಿ, ಕೇಂದ್ರಕ್ಕೆ ಕಳುಹಿಸಿ ಮಂತ್ರಿ ಮಾಡಿದ್ದೀರಿ. ತಾಲೂಕಿನ ಅಭಿವೃದ್ಧಿಗೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ಒತ್ತು ನೀಡುವೆ.

ಕಿಕ್ಕೇರಿ: ಜಿಲ್ಲೆಯ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿಯ ಋಣ ತೀರಿಸಲು ಸ್ವಲ್ಪ ಸಮಯ ಕೊಡುವಂತೆ ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಭಾನುವಾರ ಪಟ್ಟಣದ ಮೂಲಕ ಕೆ.ಆರ್.ಪೇಟೆ ತಾಲೂಕು ಕೇಂದ್ರಕ್ಕೆ ತೆರಳುವ ವೇಳೆ ಜೆಡಿಎಸ್‌ ಕಾರ್ಯಕರ್ತರು, ಗ್ರಾಮಸ್ಥರ ಪರವಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಹೋಬಳಿಯ ಗಡಿ ಭಾಗವಾದ ಆನೆಗೊಳದಲ್ಲಿ ರೈತಾಪಿ ಜನತೆ ರಸ್ತೆ ಇಕ್ಕೆಲ ನಿಂತು ಸ್ವಾಗತಿಸಿ ಹರಸಿದ ಕ್ಷಣವನ್ನು ಕಣ್ತುಂಬಿಕೊಂಡಿದ್ದೇನೆ. ನಿಮ್ಮ ಪ್ರೀತಿಯನ್ನು ಸ್ವಾರ್ಥಕ್ಕೆ ದುರುಪಯೋಗಿಸಿಕೊಳ್ಳಲಾರೆ ಎಂದರು.ಹಣ ಬಲದ ನಡುವೆ ಪ್ರೀತಿ ದೊಡ್ಡದಾಗಿ, ಪಕ್ಷಾತೀತವಾಗಿ ತನ್ನ ಗೆಲ್ಲಿಸಿ, ಕೇಂದ್ರಕ್ಕೆ ಕಳುಹಿಸಿ ಮಂತ್ರಿ ಮಾಡಿದ್ದೀರಿ. ತಾಲೂಕಿನ ಅಭಿವೃದ್ಧಿಗೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ಒತ್ತು ನೀಡುವೆ ಎಂದು ಭರವಸೆ ನೀಡಿದರು. ಅಭಿಮಾನಿಗಳು, ಜೆಡಿಎಸ್‌ ಕಾರ್ಯಕರ್ತರು ಭಾರೀ ಗಾತ್ರದ ಹೂವಿನ ಹಾರವನ್ನು ಕ್ರೇನ್ ಮೂಲಕ ಕೇಂದ್ರ ಸಚಿವರಿಗೆ ಹಾಕಿ ಜೈಕಾರ ಹಾಕಿದರು. ಈ ವೇಳೆ ಪಟಾಕಿ ಸಿಡಿಸಿ, ಪುಷ್ಪಮಾಲೆ ಹಾಕಿ ಖುಷಿಪಟ್ಟರು. ಹಲವರು ಸೆಲ್ಪಿ ತೆಗೆದುಕೊಳ್ಳಲು ಪರದಾಡಿದರು. ಹೋಬಳಿಯ ಗಡಿಯಂಚಿನ ಗ್ರಾಮವಾದ ಆನೆಗೊಳದಲ್ಲಿ ಜೆಡಿಎಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಪುಷ್ಪಮಾಲೆ ಹಾಕಿ ತಮ್ಮ ನೆಚ್ಚಿನ ನಾಯಕ ಎಚ್‌ಡಿಕೆ ಸ್ವಾಗತಿಸಿದರು. ಶಾಸಕರಾದ ಎಚ್.ಟಿ.ಮಂಜು, ಸಿ.ಎನ್. ಬಾಲಕೃಷ್ಣ, ಸ್ವರೂಪ್ ಚಂದ್, ರಾಜ್ಯ ಮಾರಾಟ ಮಹಾಮಂಡಲ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷಎಸ್.ಕೆ. ಬಾಲಕೃಷ್ಣ, ಕಾಯಿ ಮಂಜೇಗೌಡ, ಶೇಖರ್, ಐನೋರಹಳ್ಳಿ ಮಲ್ಲೇಶ್, ಕಡಹೆಮ್ಮಿಗೆ ರಮೇಶ್, ಕುಮಾರ್, ಅಂಕನಹಳ್ಳಿ ಮಂಜೇಗೌಡ, ಅಶ್ವಿನ್‌ಕುಮಾರ್ ಹಾಜರಿದ್ದರು.