ಸಾರಾಂಶ
ವಾಹನಗಳ ಮಾಲೀಕರು ಹಾಗೂ ಚಾಲಕರು ವಾಹನಗಳ ಅಗತ್ಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು, ರಸ್ತೆ ಸುರಕ್ಷಾ ನಿಯಮಗಳಲ್ಲಿ ಮುಖ್ಯವಾದ ಹೆಲ್ಮೆಟ್ ಧರಿಸುವುದು, ನಿಧಾನಗತಿಯ ಚಾಲನೆ ಮಾಡುವ ಸಲಹೆಯನ್ನು ತಪ್ಪದೇ ಪಾಲನೆ ಮಾಡುವುದು ಅತ್ಯಗತ್ಯ
ಹೊಳೆನರಸೀಪುರ : ವಾಹನಗಳ ಮಾಲೀಕರು ಹಾಗೂ ಚಾಲಕರು ವಾಹನಗಳ ಅಗತ್ಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು, ರಸ್ತೆ ಸುರಕ್ಷಾ ನಿಯಮಗಳಲ್ಲಿ ಮುಖ್ಯವಾದ ಹೆಲ್ಮೆಟ್ ಧರಿಸುವುದು, ನಿಧಾನಗತಿಯ ಚಾಲನೆ ಮಾಡುವ ಸಲಹೆಯನ್ನು ತಪ್ಪದೇ ಪಾಲನೆ ಮಾಡುವುದು ಅತ್ಯಗತ್ಯ. ಜತೆಗೆ ಪಾಲನೆ ಮಾಡಿದಾಗ ಮಾತ್ರ ಯಾವುದೇ ಅಪಘಾತಗಳು ಹಾಗೂ ಸಾವು ನೋವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವೆಂದು ಡಿವೈಎಸ್‌ಪಿ ಹಾಗೂ ಐಪಿಎಸ್ ಅಧಿಕಾರಿ ಶಾಲು ಸಲಹೆ ನೀಡಿದರು.
ಪಟ್ಟಣದ ನಗರ ಪೊಲೀಸ್ ಠಾಣೆ ಆವರಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪೋಷಕರು ಅವರ ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡುವುದು ಹೆಮ್ಮೆ ಎಂದು ಭಾವಿಸಿದ್ದಾರೆ, ಆದರೆ ಅಪ್ರಾಪ್ತರಿಗೆ ವಾಹನ ನೀಡುವುದು ಶಿಕ್ಷಾರ್ಹ ಅಪರಾಧ ಎಂಬುದನ್ನು ಅರಿಯುವುದು ಉತ್ತಮವೆಂದರು.
ವೃತ್ತ ನಿರೀಕ್ಷಕ ಬಿ.ಆರ್.ಪ್ರದೀಪ್ ಮಾತನಾಡಿ, ಡಿವೈಎಸ್‌ಪಿ ಹಾಗೂ ಐಪಿಎಸ್ ಅಧಿಕಾರಿ ಶಾಲು ಮೇಡಂ ಅವರ ಸಲಹೆಯನ್ನು ಎಲ್ಲರೂ ತಪ್ಪದೇ ಪಾಲನೆ ಮಾಡಬೇಕು. ಪೊಲೀಸರು ವಾಹನಗಳ ಮಾಲೀಕರ ಅಸಡ್ಡೆ ಹಾಗೂ ನಿಯಮಗಳ ಉಲ್ಲಂಘನೆ ಕಾರಣಕ್ಕೆ ಪ್ರಕರಣಗಳನ್ನು ದಾಖಲಿಸುತ್ತಿದ್ದರೂ ಸಹ ಜನರಲ್ಲಿ ಜಾಗೃತಿಯಿಲ್ಲ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾಯಕ್ರಮದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಾಗರಿಕರ ಒಳಿತಿಗಾಗಿ ರೂಪಿಸಿರುವ ಕಾನೂನಿನ ಪಾಲನೆ ಮಾಡದೇ ಉಲ್ಲಂಘನೆ ಮಾಡಿದಲ್ಲಿ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.
ನಗರ ಪೊಲೀಸ್ ಠಾಣೆ ಪಿಎಸ್ಸೈ ಅಭಿಜಿತ್, ಹಳ್ಳಿಮೈಸೂರು ಪೊಲೀಸ್ ಠಾಣೆ ಪಿಎಸ್ಸೈ ಸಲ್ಮಾನ್ ಖಾನ್ ತಂಬುಳಿ, ಸೌಟ್ಸ್ ಅಂಡ್ ಗೈಡ್ಸ್‌ನ ಕುಮುದಾ ರಂಗನಾಥ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ವಸಂತ ಕುಮಾರ್ ಹಾಗೂ ಮಂಗಳ, ಪಿಸಿಗಳಾದ ಜಗದೀಶ್, ನಾಗಪ್ಪ, ದೊಡ್ಡೇಗೌಡ, ಮಂಜುನಾಥ್, ಮನುಕುಮಾರ್, ಇತರರು ಸಪ್ತಾಹದಲ್ಲಿ ಭಾಗವಹಿಸಿದ್ದರು.