ಕಷ್ಟದ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಸಾಂತ್ವನ ಮತ್ತು ಬೆಂಬಲ ನೀಡುವುದು ಬಹು ದೊಡ್ಡ ಕಾಯಕವಾಗಿದ್ದು, ಅಂತಹ ಕಾರ್ಯವನ್ನು ದೇವರಾಯ ನಾಯ್ಕ ಜಲವಳ್ಳಿ ಮಾಡಿ ಬಂದಿದ್ದರಿಂದ ಸದಾ ಈ ಭಾಗದ ಜನ ಅವರನ್ನು ನೆನಪಿಸಿಕೊಳ್ಳುತ್ತಾರೆ.

ನಾಮಧಾರಿ ಸಂಘದ ಮಾಜಿ ಅಧ್ಯಕ್ಷ ದೇವರಾಯ ನಾಯ್ಕ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊನ್ನಾವರ

ಕಷ್ಟದ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಸಾಂತ್ವನ ಮತ್ತು ಬೆಂಬಲ ನೀಡುವುದು ಬಹು ದೊಡ್ಡ ಕಾಯಕವಾಗಿದ್ದು, ಅಂತಹ ಕಾರ್ಯವನ್ನು ದೇವರಾಯ ನಾಯ್ಕ ಜಲವಳ್ಳಿ ಮಾಡಿ ಬಂದಿದ್ದರಿಂದ ಸದಾ ಈ ಭಾಗದ ಜನ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ನ್ಯಾಯವಾದಿ ಎಂ.ಎನ್. ಸುಬ್ರಹ್ಮಣ್ಯ ಹೇಳಿದರು.

ತಾಲೂಕಾ ನಾಮಧಾರಿ ಸಂಘವು ಮೂಡ್ಕಣಿಯ ಶಂಭುಲಿಂಗೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ನಾಮಧಾರಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ದೇವರಾಯ ನಾಯ್ಕ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರು ನಡೆದ ದಾರಿ ನಾವು ಅರಿತುಕೊಳ್ಳಬೇಕು, ಸಮಾಜಕ್ಕೆ ಒಳ್ಳೆಯದನ್ನು ನೀಡಿದವರನ್ನು ಸ್ಮರಿಸಬೇಕು. ಜೊತೆಯಲ್ಲಿ ಇದ್ದವರ ಏಳಿಗೆಗೆ, ಕಷ್ಟದಲ್ಲಿ ಇದ್ದವರ ಕಂಬನಿಗೆ ಸ್ಪಂದಿಸಬೇಕು, ಅಂತಹ ಕಾರ್ಯವನ್ನು ದೇವರಾಯ ನಾಯ್ಕ ಮಾಡಿಬಂದಿದ್ದರಿಂದ ಸದಾ ಸ್ಮರಣೀಯರು ಎಂದರು.

ಬಿಜೆಪಿ ಮುಖಂಡ ಎಚ್.ಆರ್. ಗಣೇಶ್ ಮಾತನಾಡಿ, ಜಲವಳ್ಳಿ ದೇವರಾಯ ನಾಯ್ಕ ಊರಿನ ಎಲ್ಲರಿಗೂ ಬೇಕಾದ ವ್ಯಕ್ತಿ, ಮಾದರಿ ವ್ಯಕ್ತಿ. ಅವರು ಸಹಾಯ, ಸಹಕಾರ ನೀಡುವಾಗ ಜಾತಿ, ಅಂತಸ್ತು, ಲಾಭ ಲೆಕ್ಕಿಸಲಿಲ್ಲ ಎಂದರು.

ಸಹಕಾರಿ ಮುಖಂಡ ಪಿ.ಟಿ. ನಾಯ್ಕ ಮೂಡ್ಕಣಿ, ಕಾಂಗ್ರೆಸ್ ಮುಖಂಡ ಸುರೇಶ ನಾಯ್ಕ ರಾಜಂಗಳ, ಶಿಕ್ಷಕ ಜಿ.ಎಚ್. ನಾಯ್ಕ ಮೂಡ್ಕಣಿ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ೧ ನಿಮಿಷಗಳ ಕಾಲ ಮೌನ ಆಚರಿಸಿ ಪುಷ್ಪ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ನಾಮಧಾರಿ ಸಂಘದ ಅಧ್ಯಕ್ಷ ಟಿ.ಟಿ. ನಾಯ್ಕ ವಹಿಸಿದ್ದರು. ಮಾದೇವ ನಾಯ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಸಂಘದ ಕಾರ್ಯದರ್ಶಿ ನಾಗೇಶ ನಾಯ್ಕ ವಂದಿಸಿದರು. ಆರ್.ಪಿ. ನಾಯ್ಕ ಚಿಕ್ಕನಕೋಡ್, ಹರಿಯಪ್ಪ ನಾಯ್ಕ, ಐ.ವಿ. ನಾಯ್ಕ ನಗರೆ, ಸಿ.ಬಿ. ನಾಯ್ಕ ಕವಲಕ್ಕಿ, ಸತ್ಯಪ್ಪ ನಾಯ್ಕ, ಎಂ.ಎಸ್. ನಾಯ್ಕ ಇತರರಿದ್ದರು.