ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ವಾಗ್ದಾಳಿ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಡವರು ಸ್ವಾಭಿಮಾನದಿಂದ ಬದುಕಲು ಏನು ಬೇಕೋ ಅದನ್ನು ಕೊಡುವ ಸಿಎಂ ಸಿದ್ದರಾಮಯ್ಯ ಐದು ಉಚಿತ ಗ್ಯಾರಂಟಿಗಳನ್ನು ನೀಡಿ ಏಮಾರಿಸುತ್ತಿದ್ದಾರೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.ನವ ಕರ್ನಾಟಕ ನಿರ್ಮಾಣ ಆಂದೋಲನ ವತಿಯಿಂದ ತರಾಸು ರಂಗಮಂದಿರದಲ್ಲಿ ಶನಿವಾರ ನಡೆದ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಬೇರೆ ಬೇರೆ ಕಾಮಗಾರಿಗಳಿಗೆ ಬಳಸಲಾಗುತ್ತಿದ್ದು, ಅಟ್ರಾಸಿಟಿ ಜಾಸ್ತಿಯಾಗುತ್ತಿವೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷ ಕಳೆದಿದ್ದರೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರ ಬದುಕು ಇನ್ನೂ ಸುಧಾರಣೆಯಾಗಿಲ್ಲ. ಎಲ್ಲಾ ಪಕ್ಷಗಳು ಅವರ ಮೇಲೆ ಇವರು, ಇವರ ಮೇಲೆ ಅವರು ಆಪಾದನೆಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಿರುವುದರಿಂದ ಪರ್ಯಾಯ ಪಕ್ಷವೊಂದನ್ನು ಕಟ್ಟಬೇಕಿದೆ ಎಂದರು.ಅನಾದಿ ಕಾಲದಿಂದಲೂ ಜೀವನೋಪಾಯಕ್ಕಾಗಿ ಭೂಮಿಗಳನ್ನು ಸಾಗುವಳಿ ಮಾಡಿಕೊಂಡು ಬರುತ್ತಿರುವವರಿಗೆ ಹಕ್ಕುಪತ್ರಗಳು ಸಿಗುತ್ತಿಲ್ಲ. 33 ಸಾವಿರ ಹಳ್ಳಿಗಳ ಪೈಕಿ 11 ಸಾವಿರ ಹಳ್ಳಿಗಳಲ್ಲಿ ಸ್ಮಶಾನಕ್ಕೆ ಇನ್ನೂ ಜಾಗವಿಲ್ಲದಂತಾಗಿದೆ. ಚುನಾವಣೆಯಲ್ಲಿ ಮತದಾರರಿಗೆ ಆಸೆ ಆಮಿಷಗಳನ್ನು ತೋರಿಸಿ ಗೆದ್ದು ಹೋದವರು ಯಾರ ಕೈಗೂ ಸಿಗುತ್ತಿಲ್ಲ. ಅದಕ್ಕಾಗಿ ದಲಿತ ಸಂಘಟನೆಗಳು, ರೈತರು, ವಿವಿಧ ಹೋರಾಟಗಾರರು, ಮಹಿಳೆಯರು, ವಿದ್ಯಾರ್ಥಿಗಳು ಎಲ್ಲರೂ ಒಂದುಗೂಡಿ ಪರ್ಯಾಯ ಪಕ್ಷ ರಚನೆಗೆ ಕೈಜೋಡಿಸಿ ಎಂದು ಮನವಿ ಮಾಡಿದರು.ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯ ಸರ್ಕಾರ 5 ಉಚಿತ ಗ್ಯಾರಂಟಿಗಳನ್ನು ಕೊಟ್ಟಿರುವುದರಿಂದ ಸರ್ಕಾರ ದಿವಾಳಿಯಾಗಿದೆ. ಜನರ ಆಶೋತ್ತರಗಳಿಗೆ ಉತ್ತರ ಕೊಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶಕ್ಕೆ ಅನ್ನ ಕೊಡುವ ರೈತ ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಹಳ್ಳಿ ಹಳ್ಳಿಗೆ ಹೋಗಿ ಜನರನ್ನು ಜಾಗೃತಿಗೊಳಿಸಬೇಕಿದೆ. ವಿರೋಧ ಪಕ್ಷ ನಿತ್ರಾಣಗೊಂಡಿರುವುದರಿಂದ ಆಡಳಿತ ಪಕ್ಷದ ಅಕ್ರಮಗಳನ್ನು ಪ್ರಶ್ನಿಸಲು ಆಗುತ್ತಿಲ್ಲ ಎಂದು ಟೀಕಿಸಿದರು.
ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ಎನ್.ಮೂರ್ತಿ ಮಾತನಾಡಿ, ಗಾಂಧಿಯುಗ ಮುಗಿಯಿತು. ಅಂಬೇಡ್ಕರ್ ಯುಗ ಆರಂಭಗೊಂಡಿದೆ. ಎಲ್ಲಾ ಸಂಘಟನೆಗಳು ಒಂದಾಗಿ ಹಳ್ಳಿ ಹಳ್ಳಿಗೆ ತಿರುಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಕುತಂತ್ರಗಳನ್ನು ಜನರಿಗೆ ತಿಳಿಸಬೇಕಿದೆ. 12 ಕೋಟಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. 9 ಕೋಟಿ ಮಕ್ಕಳು ಅನ್ನವಿಲ್ಲದೆ ಬೀದಿಯಲ್ಲಿದ್ದಾರೆ. 30 ಕೋಟಿ ಜನ ನಿರುದ್ಯೋಗಿಗಳಿದ್ದಾರೆ. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಪರ್ಯಾಯ ಪಕ್ಷ ಕಟ್ಟುವ ಅಗತ್ಯವಿದೆ ಎಂದು ಹೇಳಿದರು.ಮಾಜಿ ಶಾಸಕ ಎಚ್.ಡಿ.ಬಸವರಾಜ್ ಮಾತನಾಡಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಟ್ಟಹಾಸ ಮಿತಿ ಮೀರಿದೆ. ಜನರಿಂದ ಮತ ಪಡೆದು ವಂಚಿಸುತ್ತಿರುವವರನ್ನು ಒದ್ದು ಓಡಿಸಬೇಕಾಗಿರುವುದರಿಂದ ಪರ್ಯಾಯ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದರು.
ಆಲ್ ಇಂಡಿಯಾ ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ್ ಮಾತನಾಡಿ, ದಲಿತರು, ಹಿಂದುಳಿದವರು, ಅಸ್ಪೃಶ್ಯರು, ಹೋರಾಟಗಾರರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ನಿರುದ್ಯೋಗ ಜಾಸ್ತಿಯಾಗಿದೆ. ರೈತರ ಆತ್ಮಹತ್ಯೆ ನಿಂತಿಲ್ಲ. ಕನ್ನಡ ನಾಡು, ನುಡಿ, ನೆಲ, ಜಲದ ಉಳಿವಿಗಾಗಿ ಹೊಸ ಪಕ್ಷ ಕಟ್ಟುವ ಕಾಲ ಬಂದಿದೆ. ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಅಂತಹ ವಾತಾವರಣ ರಾಜ್ಯದಲ್ಲಿ ಸೃಷ್ಠಿಯಾಗಬೇಕೆಂದು ನುಡಿದರು.ಈ ವೇಳೆ ಆಲ್ ಇಂಡಿಯಾ ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ರಾಜ್ಯ ಕಾರ್ಯದರ್ಶಿಗಳಾದ ದೊಡ್ಡೆಟ್ಟಪ್ಪ, ನವೀದ್, ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಾಂತೇಶ್ ಕೂನಬೇವು, ಭೀಮನಕೆರೆ ಶಿವಮೂರ್ತಿ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ದೊಡ್ಡುಳ್ಳಾರ್ತಿ ಕರಿಯಣ್ಣ ಇದ್ದರು.