ಸಾವಯವ ಕೃಷಿಗೆ ಆದ್ಯತೆ ನೀಡಿ

| Published : Feb 14 2025, 12:33 AM IST

ಸಾರಾಂಶ

ಸಾವಯವ ಮತ್ತು ಸಹಜ ಕೃಷಿಗೆ ಆದ್ಯತೆ ನೀಡುವ ಜತೆಗೆ ಸಾವಯವ ಗ್ರಾಮ ಪರಿಕಲ್ಪನೆಗೆ ಒತ್ತು ನೀಡುವ ಪ್ರಯತ್ನ ಆಗಬೇಕು

ಡಂಬಳ: ರಾಸಾಯನಿಕ ಗೊಬ್ಬರಗಳನ್ನು ಕೃಷಿಯಲ್ಲಿ ಅತಿಯಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಜತೆಗೆ ನಮ್ಮ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ರೈತರು ಇದನ್ನು ಗಂಭೀರವಾಗಿ ಪರಿಗಣಿಸಿ ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ತೋಂಟದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು. ಡಂಬಳ ಗ್ರಾಮದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಆಯೋಜನೆ ಮಾಡಿದ್ದ ಸಾವಯವ ಸಿರಿಧಾನ್ಯ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿ ಕ್ಷೇತ್ರ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಮುಂದೊಂದು ದಿನ ತುತ್ತು ಅನ್ನಕ್ಕೂ ಸಮಸ್ಯೆ ತಂದೊಡ್ಡಲಿದೆ. ಆದ್ದರಿಂದ ಕೃಷಿಗೆ ಪ್ರಾಧಾನ್ಯ ನೀಡಿ, ರೈತರನ್ನು ಉತ್ತೇಜಿಸುವ ಕಾರ್ಯ ತುರ್ತು ಆಗಬೇಕಾಗಿದೆ ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಮಾತನಾಡಿ, ಸಾವಯವ ಮತ್ತು ಸಹಜ ಕೃಷಿಗೆ ಆದ್ಯತೆ ನೀಡುವ ಜತೆಗೆ ಸಾವಯವ ಗ್ರಾಮ ಪರಿಕಲ್ಪನೆಗೆ ಒತ್ತು ನೀಡುವ ಪ್ರಯತ್ನ ಆಗಬೇಕು. ದೇಶದ ಆರ್ಥಿಕ, ಸಾಮಾಜಿಕ ಕ್ಷೇತ್ರಕ್ಕೆ ಕೃಷಿಯೇ ಬೆನ್ನೆಲುಬು. ವಿಶ್ವವಿದ್ಯಾಲಯಗಳು ಕೃಷಿ ಉತ್ಪನ್ನ ಹೆಚ್ಚಿಸುವ ಮತ್ತು ರೈತರ ಏಳಿಗೆಗೆ ಪೂರಕವಾದ ಸಂಶೋಧನೆಗೆ ಆದ್ಯತೆ ನೀಡಬೇಕು. ಕೃಷಿಗೆ ಉತ್ತೇಜನ ನೀಡುವ ಹಲವು ಜನಪರ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು, ರೈತರು ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಡಂಬಳ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಎಸ್.ವಿ. ರಾಮೇನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾತ್ರಾ ಸಮಿತಿ ಅಧ್ಯಕ್ಷ ಭೀಮಪ್ಪ ಗದಗಿನ, ಉಪಾಧ್ಯಕ್ಷ ಯಲ್ಲಪ್ಪ ದಂಡಿನ, ಕಾರ್ಯದರ್ಶಿ ದುರಗಪ್ಪ ಹರಿಜನ, ಖಜಾಂಚಿ ಶರಣಪ್ಪ ಬಂಡಿ, ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಗೌರಿಶಂಕರ ಸಜ್ಜನರ, ಅಕ್ಕಮಹಾದೇವಿ ಶಲವಾಡಿ, ಲಕ್ಷ್ಮೀ ರಾಘಣ್ಣವರ, ಎನ್.ಬಿ. ಹೊಸಳ್ಳಿ, ನಾಗರಾಜ ಬೋವಿ, ಮಾರುತಿ ರಾಠೋಡ, ದಾವಲಸಾಬ್ ಸೊರಟೂರ, ಮಹೇಶ ಗಡಗಿ, ಬಸವರಾಜ ಪ್ಯಾಟಿ, ಮಲ್ಲಿಕಾರ್ಜುನ ಪ್ಯಾಟಿ, ಗವಿಸಿದ್ದಪ್ಪ ಬಿಸನಳ್ಳಿ, ಬಸವರಾಜ ಬೇವಿನಮರದ, ಪರಡ್ಡಿ ಬಾವಿ, ಮುತ್ತಣ್ಣ ಕೊಂತಿಕಲ್, ಮಹೇಶ ರಾಯರಡ್ಡಿ, ಸಿದ್ದಲಿಂಗೇಶ ಮೇಟಿ, ಶಶಿಧರ ಪ್ಯಾಟಿ ಹಾಗೂ ಹಲವು ರೈತರು ಭಾಗವಹಿಸಿದ್ದರು.