ಶಿಕ್ಷಣ, ಸಂಸ್ಕಾರ ಕಲಿಸಿದ ಶಾಲೆ, ಗುರುಗಳನ್ನು ವಿದ್ಯಾರ್ಥಿಗಳು ಗೌರವಿಸಬೇಕು. ಹಳೆ ವಿದ್ಯಾರ್ಥಿಗಳಿಂದ ನಡೆಯುವ ಗುರು ವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವುದು ಸಾಮಾನ್ಯ.
ಕೊಟ್ಟೂರು: ಹಳೆ ವಿದ್ಯಾರ್ಥಿಗಳು ಗುರು ವಂದನೆ ಕಾರ್ಯಕ್ರಮ ನಡೆಸಿ ಗುರುಗಳಿಗೆ ಸನ್ಮಾನ ಮಾಡುವುದಕ್ಕಿಂದ ಶಾಲೆಗೆ ನೆನೆಪಿನಲ್ಲಿಯುವಂತಹ ಕಾರ್ಯ ಮಾಡಿರುವುದು ಇತರರಿಗೆ ಮಾದರಿ ಎಂದು ನಿವೃತ್ತ ಬಿಇಒ ಕೆ.ಜಯಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಹಿ.ಪ್ರಾ. ಮಾದರಿ ಗಚ್ಚಿನಮಠ ಶಾಲೆಯ ಹಳೆ ವಿದ್ಯಾರ್ಥಿ ಗೆಳೆಯರ ಬಳಗದವರು ₹4 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅನ್ನ ದಾಸೋಹದ ಚಾವಣಿ ಉದ್ಘಾಟನಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಅವರು ಶನಿವಾರ ಮಾತನಾಡಿದರು.ಶಿಕ್ಷಣ, ಸಂಸ್ಕಾರ ಕಲಿಸಿದ ಶಾಲೆ, ಗುರುಗಳನ್ನು ವಿದ್ಯಾರ್ಥಿಗಳು ಗೌರವಿಸಬೇಕು. ಹಳೆ ವಿದ್ಯಾರ್ಥಿಗಳಿಂದ ನಡೆಯುವ ಗುರು ವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವುದು ಸಾಮಾನ್ಯ. ಆದರೆ ಈ ಶಾಲೆಯ 7ನೇ ತರಗತಿಯಲ್ಲಿ ಶಿಕ್ಷಣ ಪೂರೈಸಿದ ಅನೇಕ ಹಳೆ ವಿದ್ಯಾರ್ಥಿಗಳ ಗೆಳೆಯರ ಬಳಗದವರು ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಊಟ ಮಾಡುವುದಕ್ಕಾಗಿ ಅನ್ನ ದಾಸೋಹದ ಚಾವಣಿ ನಿರ್ಮಿಸಿ ಕೊಟ್ಟಿರುವುದು, ಅದರಲ್ಲೂ ಸರ್ಕಾರಿ ಶಾಲೆಗೆ ನಿರ್ಮಿಸಿರುವುದು ಇತರರಿಗೂ ಮಾದರಿ ಕೆಲಸವಾಗಿದೆ. ಪ್ರೌಢ ಶಾಲೆಯಲ್ಲಿ ಓದಿದ್ದ ಎಲ್ಲರನ್ನೂ ಒಟ್ಟುಗೂಡಿಸಿದ್ದ ಇದೇ ಗೆಳೆಯರ ಬಳಗದವರು ತಾವೇ ವಂತಿಗೆ ಹಾಕಿಕೊಂಡು ಶಾಲೆಗೆ ದೊಡ್ಡ ಕೊಡುಗೆ ನೀಡಿದ್ದಾರೆಂದು ಪ್ರಶಂಸಿದರು.ಗೆಳೆಯರ ಬಳಗದ ಗೌರವ ಅಧ್ಯಕ್ಷ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ ಮಾತನಾಡಿ, ಶಾಲೆ ಆವರಣದಲ್ಲಿದ್ದ ವೇದಿಕೆ ಮುಂಭಾಗದಲ್ಲಿ ಚಾವಣಿ ನಿರ್ಮಿಸುವು ಯೋಚನೆ ಬಂದಾಗ ಎಲ್ಲ ಗೆಳೆಯರು ಕೈ ಜೋಡಿಸಿದರು. ಇದು ಶಾಲೆ ಮಕ್ಕಳಿಗೆ ಊಟ ಮಾಡುವ ದೊಡ್ಡ ಮಂಟಪವಾಗಲಿ ಎಂದರು.
ಬಳಗದ ಅಧ್ಯಕ್ಷ ಬಸಾಪುರ ಪಂಪಾಪತಿ ಮಾತನಾಡಿ, ವಿದ್ಯಾರ್ಥಿಯಾಗಿ ಚೆನ್ನಾಗಿ ಓದಿದ ನಂತರ 60ನೇ ವಯಸ್ಸಿನವರೆಗೆ ದುಡಿಯಬೇಕು. ನಂತರ ಗಳಿಸಿದ ಹಣವನ್ನು ಸದ್ವಿನಿಯೋಗ ಮಾಡಬೇಕು ಎಂಬ ಚಿಂತಕರ ಮಾತಿನಂತೆ ಹಳೆ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಶಾಲೆಗಾಗಿ ಸಾರ್ಥಕ ಕೆಲಸ ಮಾಡಿದ್ದೇವೆ ಎಂದರು.ಶಾಲೆಯ ನಿವೃತ್ತ ಶಿಕ್ಷಕ ಹಳ್ಳಿ ಸೋಮಣ್ಣ, ನಿವೃತ್ತ ಶಿಕ್ಷಕ ಬಸವರಾಜಪ್ಪ, ಬಳಗದ ಉಪಾಧ್ಯಕ್ಷ ಟಿ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಕಾಸೀಂಸಾಬ್, ಕಾರ್ಯದರ್ಶಿ ಸುರೇಶಗೌಡ, ಖಜಾಂಚಿ ಕಂಡಕ್ಟರ್ ಕೊಟ್ರೇಶ್, ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶಿವಣ್ಣ, ಮುಖ್ಯ ಶಿಕ್ಷಕಿ ವಿ.ಆರ್.ಕಲಾಲ್ ಇದ್ದರು. ಸಂಯೋಜಕ ಡಿ.ಚಾಮರಸ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಲೆಯ ಹಳೆ ಕಟ್ಟಡದಿಂದ ಪ್ರಮುಖ ಬೀದಿ ಮೂಲಕ ಹಾಲಿ ಶಾಲೆವರೆಗೆ ಹಳೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.