ಆಧುನಿಕತೆ ದಿನಗಳಲ್ಲಿ ವಿಜ್ಞಾನ ತಂತ್ರಜ್ಞಾನಕ್ಕೆ ತಕ್ಕಂತೆ ಜೀವನ ನಡೆಸಬೇಕು, ಮಕ್ಕಳಿಗೆ ಅದೇ ತೆರನಾದ ಉತ್ತಮ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣ ಕೊಡಿಸಬೇಕು

ಕುಷ್ಟಗಿ: ವಿಶ್ವಕರ್ಮ ಸಮಾಜದವರು ತಮ್ಮ ಮಕ್ಕಳಿಗೆ ಕುಲಕಸುಬಿಗೆ ಪೂರಕ ಶಿಕ್ಷಣ ಕೊಡಿಸಬೇಕು ಎಂದು ಕಾಂಗ್ರೆಸ್‌ ಯುವ ಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲೂಕು ವಿಶ್ವಕರ್ಮ ಸಮಾಜ, ತಾಲೂಕಾಡಳಿತದಿಂದ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ, ತಿಂಥಣಿ ಮೌನೇಶ್ವರ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆಧುನಿಕತೆ ದಿನಗಳಲ್ಲಿ ವಿಜ್ಞಾನ ತಂತ್ರಜ್ಞಾನಕ್ಕೆ ತಕ್ಕಂತೆ ಜೀವನ ನಡೆಸಬೇಕು, ಮಕ್ಕಳಿಗೆ ಅದೇ ತೆರನಾದ ಉತ್ತಮ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣ ಕೊಡಿಸಬೇಕು ಆರ್ಥಿಕವಾಗಿ ಬಡತನ ಇದ್ದರು ಪರವಾಗಿಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಜ್ಞಾನವಂತರನ್ನಾಗಿ ಮಾಡಬೇಕು ಎಂದ ಅವರು, ನಾವು ಎಷ್ಟೇ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದರೂ ಸಹಿತ ಕುಲಕಸುಬು ಬಗ್ಗೆ ಕೀಳರಿಮೆ ಕಾಣಬಾರದು ಎಂದು ತಿಳಿಸಿದರು.

ಶಿಕ್ಷಕ ರಾಮಚಂದ್ರಪ್ಪ ಬಡಿಗೇರ ಉಪನ್ಯಾಸ ನೀಡಿ, ವಿಶ್ವದಲ್ಲಿ ಕಾಯಕ ಮಾಡುವ ಸಂಸ್ಕೃತಿಯು ವಿಶ್ವಕರ್ಮ ಸಮಾಜದಿಂದ ಹುಟ್ಟಿದೆ ಎಂದ ಅವರು, ಯಾವುದೇ ತಂತ್ರಜ್ಞಾನ ಇರಲಾರದ ಕಾಲದಲ್ಲಿಯೆ ಜಕಣಾಚಾರಿ ಕೇವಲ ಕಲ್ಪನೆಯ ಮೂಲಕ ಇಂದಿನ ತಂತ್ರಜ್ಞಾನ ಯುಗಕ್ಕೆ ಶೆಡ್ಡು ಹೊಡೆಯುವಂತಹ ಕಲಾಕೃತಿ ನಿರ್ಮಿಸಿದ್ದು ಇಂದು ಐತಿಹಾಸಿಕ ಪ್ರವಾಸಿ ತಾಣಗಳಾಗಿವೆ ವಾಸ್ತುಶಿಲ್ಪಕ್ಕೆ ಜಕಣಾಚಾರಿಯವರ ಕೊಡುಗೆ ಪ್ರಮುಖವಾಗಿದೆ. ಅಂತಹವರು ಜನ್ಮತಾಳಿರುವ ವಿಶ್ವಕರ್ಮ ಸಮಾಜದಲ್ಲಿ ಜನಿಸಿರುವದು ಪುಣ್ಯ. ಅವರ ತತ್ವ ಅಳವಡಿಸಿಕೊಂಡು ಆದರ್ಶಪ್ರಾಯ ಜೀವನ ನಡೆಸಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ನಟರಾಜ ಸೋನಾರ ಮಾತನಾಡಿ, ಇಂದಿನ ದಿನಗಳಲ್ಲಿ ನಮ್ಮ ವಿಶ್ವಕರ್ಮ ಸಮಾಜದ ಕುಲಕಸುಬು ನಶಿಸಿ ಹೋಗುತ್ತಿದ್ದು ಸಮಾಜದ ಜನರು ಜಾಗೃತರಾಗಬೇಕು ಎಂದ ಅವರು, ತಿಂಥಣಿ ಮೌನೇಶ್ವರರ ವಚನ ಅರ್ಥೈಸಿಕೊಂಡು ಜೀವನ ನಡೆಸಬೇಕು ಇವರು ಭಾವೈಕ್ಯತೆ ಶರಣರು ಎಂದರು.

ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಶರಣಪ್ಪ ಬಡಿಗೇರ ಮಾತನಾಡಿ, ಸಮಾಜದ ಯುವಕರು ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು, ಶಿಕ್ಷಣವಂತರಾಗಬೇಕು, ದುಶ್ಚಟಕ್ಕೆ ಬಲಿಯಾದವರಿಗೆ ಬುದ್ಧಿ ಹೇಳಿ ಸರಿದಾರಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ನಾಗಮೂರ್ತೇಂದ್ರ ಶ್ರೀಗಳು, ದಿವಾಕರ ಶ್ರೀಗಳು, ನರಸಿಂಹಚಾರ್ಯರು, ಈಶಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ರಾಮಚಂದ್ರಪ್ಪ ಬಡಿಗೇರ, ಮಹಾದೇವಪ್ಪ ಕಮ್ಮಾರ, ನಾಗಲಿಂಗಪ್ಪ ಪತ್ತಾರ, ದೇವೆಂದ್ರಪ್ಪ ಬಡಿಗೇರ, ಮಾನಪ್ಪ ಕಮ್ಮಾರ, ಸವಿತಾ ಬಡಿಗೇರ, ಸಿದ್ದಪ್ಪ ಬಡಿಗೇರ, ಗುರಪ್ಪ ಬಡಿಗೇರ, ವಿರೇಶ ಕಮ್ಮಾರ, ಕೃಷ್ಣಪ್ಪ ಪತ್ತಾರ, ಶ್ರೀಶೈಲಪ್ಪ ಬಡಿಗೇರ, ಗಾಯತ್ರಮ್ಮ ಬಡಿಗೇರ, ಲಕ್ಷ್ಮೀಬಾಯಿ ಕಮ್ಮಾರ, ಮಹಾಂತೇಶ ಬಡಿಗೇರ, ಮಹಾಲಿಂಗಪ್ಪ ದೋಟಿಹಾಳ, ಕಾಳಮ್ಮ ಬಡಿಗೇರ, ಕಾಳಪ್ಪ ಬಡಿಗೇರ, ಅನೀಲಕುಮಾರ ಕಮ್ಮಾರ, ಬಸವರಾಜ ಬಡಿಗೇರ, ಮಾರುತಿ ಕಮ್ಮಾರ ಸೇರಿದಂತೆ ವಿಶ್ವಕರ್ಮ ಸಮಾಜದ ಗಣ್ಯರು ಮಹಿಳೆಯರು ಯುವಕರು ಇದ್ದರು.

ಬೆಳಗ್ಗೆ ಅಮರಶಿಲ್ಪಿ ಜಕಣಾಚಾರಿ ಹಾಗೂ ತಿಂಥಣಿ ಮೌನೇಶ್ವರರ ಭಾವಚಿತ್ರ ಮೆರವಣಿಗೆ ನಡೆಯಿತು. ನಾಲ್ವರಿಗೆ ಉಪನಯನ ಕಾರ್ಯಕ್ರಮ ನಡೆಯಿತು.