ಸಾರಾಂಶ
ಬ್ಯಾಡಗಿ: ಹಲವು ದಶಕಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಜಿಲ್ಲೆಯ ಎಲ್ಲ ಸಾಹಿತ್ಯಾಭಿಮಾನಿಗಳು ಹಾಗೂ ಕಸಾಪ ಪದಾಧಿಕಾರಿಗಳು ನನ್ನನ್ನು ಆಯ್ಕೆ ಮಾಡುವ ಮೂಲಕ ಮಹಿಳಾ ಸಾಹಿತಿಗಳಿಗೆ ಅವಕಾಶ ಕಲ್ಪಿಸಿರುವುದು ಖುಷಿ ತಂದಿದೆ ಎಂದು ಸಾಹಿತಿ ಸಂಕಮ್ಮ ಸಂಕಣ್ಣನವರ ತಿಳಿಸಿದರು.
ಪಟ್ಟಣದ ನಿಸರ್ಗ ನಗರದ ನಿವಾಸದಲ್ಲಿ ಜಿಲ್ಲಾ ಹಾಗೂ ತಾಲೂಕು ಕಸಾಪ ವತಿಯಿಂದ ಭಾನುವಾರ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು.ಎರಡು ದಶಕಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರ್ತಿಸಿ ಜ. ೧೦ ಹಾಗೂ ೧೧ರಂದು ಜರುಗುವ ೧೪ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ತೀವ್ರ ಖುಷಿ ತಂದಿದೆ. ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸಿದ ಎಲ್ಲರಿಗೂ ಗೌರವ ಸಿಗಬೇಕು. ಸಾಹಿತ್ಯ ಕೃಷಿ ಮಾಡಿದವರನ್ನು ಗುರ್ತಿಸುವ ಮೂಲಕ ಪ್ರೋತ್ಸಾಹ ಹಾಗೂ ಸ್ಫೂರ್ತಿ ತೋರಬೇಕು. ಮಹಿಳಾ ಸಾಹಿತಿಯಾಗಿರುವ ನನ್ನನ್ನು ಗುರ್ತಿಸಿ ಸಹಕಾರ ನೀಡಿರುವುದಕ್ಕೆ ಸಾಹಿತ್ಯಾಭಿಮಾನಿಗಳಿಗೆ ಹಾಗೂ ಕಸಾಪ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ರಾಜ್ಯಮಟ್ಟದಲ್ಲಿ ವಿವಿಧ ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತಿಯಾಗಿರುವ ಸಾಹಿತಿ ಸಂಕಮ್ಮ ಸಂಕಣ್ಣನವರ ಆಯ್ಕೆ ಮಾಡಿರುವುದು ಸಾಹಿತ್ಯ ವಲಯದಲ್ಲಿ ಮಹಿಳಾ ಸಾಹಿತಿಯೊಬ್ಬರಿಗೆ ಗೌರವ ಸಲ್ಲಿಸಿದಂತಾಗಿದೆ. ಅವರು ಚಲನಚಿತ್ರ ಕಥೆ ಬರಹ, ಪುಸ್ತಕ, ಕವನ ಸಂಕಲನ, ಪತ್ರಿಕೆಗಳಲ್ಲಿ ವಿವಿಧ ಅಂಕಣ, ಹಲವು ನಾಟಕ ರಚನೆ, ಮೈಲಾರ ಮಹದೇವ ಹಾಗೂ ಸಿದ್ದಮ್ಮರಂತಹ ಹೋರಾಟಗಾರರ ಜೀವನ ಚರಿತ್ರೆ ರಚಿಸಿದ್ದಲ್ಲದೆ, ಆ ಚಲನಚಿತ್ರದಲ್ಲಿ ಪಾತ್ರಧಾರಿಯಾಗಿ ಸಾಹಿತ್ಯ ಲೋಕವನ್ನು ಮುಗಿಲೆತ್ತರಕ್ಕೆ ಒಯ್ದಿದ್ದಾರೆ. ಬ್ಯಾಡಗಿ ಕೆಂಪು ಮೆಣಸಿನಕಾಯಿ ಕಂಪನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಹರಡುವಲ್ಲಿ ಸಂಕಮ್ಮನವರ ಕವನ ಬ್ಯಾಡಗಿಯ ಬೆಡಗಿ ಹೆಚ್ಚು ಖ್ಯಾತಿಯಾಗಿದೆ. ಪಾಪು ಅವರಂತಹ ದೊಡ್ಡ ಸಾಹಿತಿಗಳ ಜೊತೆಯಾಗಿ ಅವರ ಶಿಷ್ಯೆಯಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದು, ಮಹಿಳಾ ಸಾಹಿತ್ಯ ಲೋಕದಲ್ಲಿ ಅವಿರತ ಸಾಧನೆ ಹಾಗೂ ಅಪ್ಪಟ ಕನ್ನಡಾಂಬೆಗೆ ಸಲ್ಲಿಸಿದ ಸೇವೆ ಮರೆಯಲಾಗದು. ಇಂತಹ ಸಾಹಿತ್ಯ ಶಕ್ತಿಯನ್ನು ನಾವೆಲ್ಲ ಗುರ್ತಿಸಿ ಗೌರವಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜ. ೧೦ ಹಾಗೂ ೧೧ರಂದು ಹಿರೇಕೆರೂರಲ್ಲಿ ಜರುಗುವ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾವೆಲ್ಲ ಅವರನ್ನು ಆಯ್ಕೆ ಮಾಡಿದ್ದೇವೆ. ರಾಜ್ಯಮಟ್ಟದಲ್ಲಿ ಗಮನ ಸೆಳೆಯುವಂತಹ ಕಾರ್ಯಕ್ರಮ ನಾವು ಮಾಡಬೇಕಿದೆ. ಹಾವೇರಿ ಜಿಲ್ಲೆಯಲ್ಲಿ ದೊಡ್ಡ ರಾಜ್ಯಮಟ್ಟದ ಕಸಾಪ ಸಮ್ಮೇಳನ ಮಾಡಿದ ಕೀರ್ತಿಯಿದ್ದು, ಈ ಕಾರ್ಯಕ್ರಮ ಇನ್ನಷ್ಟು ಯಶಸ್ವಿಯಾಗಿ ಮಾಡೋಣ ಎಂದರು.ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಕಸಾಪ ಅಧ್ಯಕ್ಷ ಬಿ.ಎಂ. ಜಗಾಪುರ, ಗೋಣೆಪ್ಪ ಸಂಕಮ್ಮನವರ, ಮಾಲತೇಶ ಅರಳಿಮಟ್ಟಿ, ಎನ್. ಸುರೇಶಕುಮಾರ, ಗಿರೀಶ ಇಂಡಿಮಠ, ಪಿ.ಎಸ್. ಸಾಲಿ, ಕುಮಾರ ಮಡಿವಾಳರ, ಮಂಜುನಾಥ ಕಳ್ಳಿಹಾಳ, ರಾಮಣ್ಣ ತೆಂಬದ, ಬಿ.ಟಿ. ಚಿಂದಿ, ಪಿ.ಬಿ. ನಿಂಗನಗೌಡ್ರ, ಬಿ.ವಿ. ಸೊರಟೂರ, ವಸಂತ ಮಾಳಪ್ಪನವರ, ಚಂದ್ರು ಛತ್ರದ, ಈರಣ್ಣ ಬೆಟ್ಟದೂರು ಇತರರಿದ್ದರು.
೧೫ಬಿವೈಡಿ೧ಬ್ಯಾಡಗಿಯ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರನ್ನು ಜಿಲ್ಲಾ ಕಸಾಪ ಪದಾಧಿಕಾರಿಗಳು ಸನ್ಮಾನಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಬಿ.ಎಂ.ಜಗಾಪುರ, ಗೋಣೆಪ್ಪ ಸಂಕಮ್ಮನವರ, ಎನ್.ಸುರೇಶಕುಮಾರ, ಗಿರೀಶ ಇಂಡಿಮಠ, ಪಿ.ಎಸ್.ಸಾಲಿ, ಕುಮಾರ ಮಡಿವಾಳರ, ಮಂಜುನಾಥ ಕಳ್ಳಿಹಾಳ, ರಾಮಣ್ಣ ತೆಂಬದ, ಬಿ.ಟಿ.ಚಿಂದಿ, ಪಿ.ಬಿ.ನಿಂಗನಗೌಡ್ರ, ಬಿ.ವಿ.ಸೊರಟೂರ, ಚಂದ್ರು ಛತ್ರದ ಇತರರಿದ್ದರು.