ಸಾರಾಂಶ
ವಿಧಾನಸೌಧ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರವು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಮಯವನ್ನು ಸಂಪೂರ್ಣವಾಗಿ ವ್ಯರ್ಥ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಪ್ರಹಾರ ನಡೆಸಿದ್ದಾರೆ.
ಭಾನುವಾರ ಸುದ್ದಿಗಾರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತಿದೆ. ಈ ಅವಧಿಯಲ್ಲಿ ಕೋವಿಡ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈಗ ಕೋವಿಡ್ ಕುರಿತಂತೆ ಮಧ್ಯಂತರ ವರದಿ ತೆಗೆದುಕೊಂಡು ಅದರ ಆಧಾರದಲ್ಲಿ ಎಫ್‍ಐಆರ್ ದಾಖಲಿಸಿ ಅದನ್ನು ಸೋಮವಾರ ಅಧಿವೇಶನದಲ್ಲಿ ಚರ್ಚಿಸಲು ಮುಂದಾಗಿದೆ. ಅಲ್ಲದೇ, ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ದಾಖಲಾಗಿರುವ ಪ್ರಕರಣಗಳ ವಿಚಾರವಾಗಿ ಕುರಿತಂತೆ ಚರ್ಚಿಸಲು ನಿರ್ಣಯಿಸಿದೆ. ಇದು ಸದನವನ್ನು ದಿಕ್ಕು ತಪ್ಪಿಸುವ ಕೆಲಸವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕಿಡಿಕಾರಿದರು.
ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಯಾವ ಸಚಿವರು ತಯಾರಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ, ಬಾಣಂತಿಯರು, ಶಿಶುಗಳ ಸಾವಿನ ಕುರಿತು ಚರ್ಚಿಸಲು ಸಹ ಸಿದ್ಧವಿಲ್ಲ. ಮುಡಾ ಹಗರಣ ಸಂಬಂಧ ಸಿಬಿಐ ತನಿಖೆಯಾಗಬೇಕು ಎಂಬ ಚರ್ಚೆ ನಡೆದಿದೆ. ಈ ನಡುವೆ ಇ.ಡಿ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ವಿಚಲಿತರಾದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಸರ್ಕಾರವು ಸಮಸ್ಯೆಗಳಿಂದ ಓಡಿಹೋಗುವ ಪ್ರಯತ್ನ ಮಾಡುತ್ತಿದೆ. ಬೆಳಗಾವಿಯಲ್ಲಿ ಸರ್ಕಾರದ ಕುಮ್ಮಕ್ಕಿನಿಂದ ಪಂಚಮಸಾಲಿ ಸಮುದಾಯ ಮತ್ತು ಹಿಂದೂಗಳ ಮೇಲೆ ಲಾಠಿಪ್ರಹಾರವಾಗಿದೆ.
ಈ ವಿಚಾರವಾಗಿ ಮುಖ್ಯಮಂತ್ರಿಗಳಾಗಲಿ, ಗೃಹ ಸಚಿವರಾಗಲಿ ಸದನದಲ್ಲಿ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಅಧಿಕಾರದ ಮದ ಇವರ ನೆತ್ತಿಗೇರಿದಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರವು ಅಧಿಕಾರ ಶಾಶ್ವತ ಎಂಬ ಭ್ರಮೆಯಲ್ಲಿದ್ದಂತೆ ಇದೆ. ಹೀಗಾಗಿ ಮುಖ್ಯಮಂತ್ರಿಗಳು ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ಇದು ಖಂಡಿತ ಸರಿಯಲ್ಲ ಎಂದು ಟೀಕಿಸಿದ ಅವರು, ಸೋಮವಾರ ಉತ್ತರ ಕರ್ನಾಟಕದ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಿದೆ. ಇವರ ರಾಜಕೀಯಪ್ರೇರಿತ ತನಿಖೆ, ದಬ್ಬಾಳಿಕೆಗಳಿಗೆ ಹೆದರಿ ಓಡಿಹೋಗುವ ಪ್ರಶ್ನೆ ಇಲ್ಲ. ಏನೇ ಬಂದರೂ ಅದನ್ನು ಧೈರ್ಯವಾಗಿ ಎದುರಿಸುತ್ತೇವೆ ಎಂದು ಸವಾಲು ಹಾಕಿದರು.
ರಾಜ್ಯ ಸರಕಾರವು ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.
ಕಾಂಗ್ರೆಸ್‌ನಲ್ಲಿ ದೊಡ್ಡಪ್ಪ, ಚಿಕ್ಕಪ್ಪ ಮಕ್ಕಳು ಇದ್ದರಾ?:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಆಡಳಿತ ವೇಳೆ ಅನ್ವರ್ ಮಾಣಿಪ್ಪಾಡಿ ಅವರ ವಕ್ಫ್ ಕುರಿತ ವರದಿಯಲ್ಲಿ ಕಾಂಗ್ರೆಸ್ ಮುಖಂಡರ ಅವ್ಯವಹಾರದ ವಿವರ ಇತ್ತು. ಮುಖ್ಯಮಂತ್ರಿಗಳ ಮಗನಾಗಿ ನಾನು ಯಾಕೆ ಅನ್ವರ್ ಮಾಣಿಪ್ಪಾಡಿ ಅವರ ಮನೆಗೆ ಹೋಗಲಿ? ಕಾಂಗ್ರೆಸ್ ಮುಖಂಡರನ್ನು ಬಚಾವ್ ಮಾಡಲು ನಾನು 150 ಕೋಟಿ ರು. ಯಾಕೆ ಆಫರ್ ಮಾಡಲಿ? ಇದರಲ್ಲಿ ಏನಾದರೂ ತರ್ಕ ಇದೆಯೇ? ಇದನ್ನು ಮುಂದಿಟ್ಟು ಸದನದ ಸಮಯ ವ್ಯರ್ಥ ಮಾಡುವುದಾದರೆ ಅದು ಮೂರ್ಖತನದ ಪರಮಾವಧಿ. ಕಾಂಗ್ರೆಸ್‌ನಲ್ಲಿ ದೊಡ್ಡಪ್ಪ, ಚಿಕ್ಕಪ್ಪ ಮಕ್ಕಳು ಇದ್ದರಾ? ಶಾಸಕರ, ಸಚಿವರ ಮಾತು ಕೇಳಿ ಮುಖ್ಯಮಂತ್ರಿಗಳು ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.