ಮಂಗಳೂರು ನೆಹರೂ ಮೈದಾನದಲ್ಲಿ ಭಾನುವಾರ ಜಾಗತಿಕ ಬಿಲ್ಲವರ ಕ್ರೀಡೋತ್ಸವ ನಡೆಯಿತು. ವಿವಿಧೆಡೆಗಳ 80ಕ್ಕೂ ಹೆಚ್ಚು ತಂಡಗಳು ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದವು.
ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಭಾನುವಾರ ಜಾಗತಿಕ ಬಿಲ್ಲವರ ಕ್ರೀಡೋತ್ಸವ ನಡೆಯಿತು.
ವಿವಿಧೆಡೆಗಳ 80ಕ್ಕೂ ಹೆಚ್ಚು ತಂಡಗಳು ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದವು. ಹಗ್ಗ- ಜಗ್ಗಾಟ (ಪುರುಷರು ಮತ್ತು ಮಹಿಳೆಯರಿಗೆ), ವಾಲಿಬಾಲ್ (ಪುರುಷರಿಗೆ) ತ್ರೋಬಾಲ್ (ಮಹಿಳೆಯರಿಗೆ) ಹಾಗೂ ಮಕ್ಕಳಿಗೆ ವಿವಿಧ ವಿನೋದಾವಳಿ ಆಟಗಳು ನಡೆದವು.ಕ್ರೀಡೋತ್ಸವ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ನೆಹರೂ ಮೈದಾನದವರೆಗೆ ಕ್ರೀಡಾ ಜ್ಯೋತಿ ಮೆರವಣಿಗೆ ನಡೆಯಿತು. ನಾರಾಯಣ ಗುರುಗಳ ಭಾವಚಿತ್ರ ಹೊತ್ತ ವಾಹನದ ಜತೆಗೆ ಬ್ಯಾಂಡ್- ವಾದನಗಳೊಂದಿಗೆ 50ಕ್ಕೂ ಅಧಿಕ ಕಾರುಗಳ ಮೆರವಣಿಗೆ ನಡೆಯಿತು. ಕಬಡ್ಡಿ ವಿಶ್ವಕಪ್ ಚಿನ್ನದ ಪದಕ ವಿಜೇತ ಭಾರತೀಯ ತಂಡದ ಸದಸ್ಯೆ ಧನಲಕ್ಷ್ಮಿ ಪೂಜಾರಿ ಕ್ರೀಡಾ ಜ್ಯೋತಿಯ ನೇತೃತ್ವ ವಹಿಸಿದ್ದರು.ಇತರರಿಗೆ ಸ್ಫೂರ್ತಿಯಾಗಲಿ:ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕ್ರೀಡೆಯ ಮೂಲಕ ಸಮಾಜವೊಂದನ್ನು ಕಟ್ಟಬಹುದು. ಈ ಕ್ರೀಡಾಕೂಟದ ಮೂಲಕ ಬಿಲ್ಲವ ಸಮಾಜಕ್ಕೆ ಹೊಸ ಶಕ್ತಿ ಸಿಗಲಿ. ರಾಜ್ಯದ ಶೇ. 60ರಷ್ಟು ಹಿಂದುಳಿದ ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದು ಹೇಳಿದರು.
ಚಿತ್ರನಟ ವಿಜಯ ರಾಘವೇಂದ್ರ ಮಾತನಾಡಿ, ಸಮಾಜ ಬೆಳೆಯಬೇಕಾದರೆ ಮೊದಲು ನಾವು ಮಾನವರಾಗಬೇಕು. ಪ್ರಜ್ಞಾವಂತರಾಗಿ ಬೆಳೆಯುವ ಅಗತ್ಯವಿದೆ ಎಂದರಲ್ಲದೆ, ಕ್ರೀಡಾ ಮನೋಭಾವದಿಂದ ಭಾಗವಹಿಸಿ ಎಲ್ಲರಿಗೂ ಮಾದರಿಯಾಗಬೇಕು ಎಂದರು.ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಮಾತನಾಡಿದರು. ಕಾರ್ಯಕ್ರಮಕ್ಕೆ ಮೊದಲು ನಾರಾಯಣ ಗುರುಗಳ ಭಾವಚಿತ್ರಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು.ಕ್ರೀಡೋತ್ಸವವನ್ನು ಮೈಸೂರಿನ ಪೂಜಾರಿ ಫಿಶ್ ಲ್ಯಾಂಡ್ ಮಾಲೀಕ ಎಲ್. ಸುಧಾಕರ ಪೂಜಾರಿ ಉದ್ಘಾಟಿಸಿದರು. ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಶ್ರೀ ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಮಾಜಿ ಶಾಸಕ ರುಕ್ಮಯ ಪೂಜಾರಿ, ದ.ಕ. ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರ, ಸಂಘಟನಾ ಕಾರ್‍ಯದರ್ಶಿ ಉದಯಚಂದ್ರ ಡಿ. ಸುವರ್ಣ, ಸುಧೀರ್ ಕುಮಾರ್ ವೈ., ಕ್ರೀಡಾಪಟುಗಳಾದ ಕೆ.ಎಸ್. ಅಶೋಕ್, ದೀಕ್ಷಿತ್ ಪೂಜಾರಿ, ಅನುಶ್ ಪ್ರಾಂಜಲ್, ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ, ಮನಪಾ ಮಾಜಿ ಸದಸ್ಯರಾದ ಕಿರಣ್ ಕೊಡಿಕಲ್, ಶ್ವೇತಾ ಪೂಜಾರಿ, ಪುತ್ತೂರು ಬಿಲ್ಲವ ಸಂಘದ ಸತೀಶ್ ಕೆಡಿಂಜೆ, ಉದ್ಯಮಿ ವಿನಯಚಂದ್ರ ಡಿ. ಸುವರ್ಣ, ಕಾರ್‍ಯದರ್ಶಿ ಸಮಲತಾ ಸುವರ್ಣ, ಗೀತಾಂಜಲಿ ಸುವರ್ಣ, ಸುಖಲಕ್ಷ್ಮಿ ಸುವರ್ಣ, ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಕ್ರೀಡಾ ಖಜಾಂಚಿ ಜಯಪ್ರಕಾಶ್, ನಿವೃತ್ತ ದೈಹಿಕ ಶಿಕ್ಷಕ ಪುರುಷೋತ್ತಮ ಪೂಜಾರಿ, ಪ್ರಮಲ ಕುಮಾರ್ ಇದ್ದರು. ಪ್ರಧಾನ ಕಾರ್‍ಯದರ್ಶಿ ಜೀವನ್ ಕುಮಾರ್ ತೊಕೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು.