ಹುಬ್ಬಳ್ಳಿ:

ಮಾನವ ಜೀವ ಉಳಿಸುವ ವೈದ್ಯರು ದೇವರ ಸಮಾನ, ಹಿಂದಿನ ಕಾಲದಲ್ಲಿ ರೋಗ ಚಿಕಿತ್ಸೆಗೆ ಮುಖ್ಯವಾಗಿ ಆಯುರ್ವೇದ ಪದ್ಧತಿ ಅನುಸರಿಸಲಾಗುತ್ತಿತ್ತು. ನಂತರ ಬ್ರಿಟಿಷರ ಆಡಳಿತದ ಅವಧಿಯಲ್ಲಿ ಪಾಶ್ಚಾತ್ಯ ವೈದ್ಯಕೀಯ ಪದ್ಧತಿ (ಅಲೋಪಥಿ) ವ್ಯಾಪಕವಾಗಿ ಪರಿಚಯಗೊಂಡು, ಪರಂಪರಾಗತ ವ್ಯವಸ್ಥೆಗಳ ಪ್ರಭಾವ ಕಡಿಮೆಯಾಯಿತು ಎಂದು ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ್ ಹೇಳಿದರು. ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ತದ್ವಿದ್ಯ ಸಂಭಾಷಾ ಪರಿಷತ್ ಟ್ರಸ್ಟ್ ವತಿಯಿಂದ ನಾಲ್ಕು ದಿನಗಳ ಕಾಲ ಆಯೋಜಿಸಿರುವ ಅಂತಾರಾಷ್ಟ್ರೀಯ ಬೌದ್ಧಿಕ ಆಯುರ್ವೇದ ಸಮ್ಮೇಳನ ಹಾಗೂ ಎಕ್ಸ್‌ಪೋ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಭಾರತದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಾದ ಗುರುಕಲ ಪದ್ಧತಿ ಕೂಡ ಬ್ರಿಟಿಷರ ಕಾಲದಲ್ಲಿ ಹಿನ್ನಡೆ ಕಂಡಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಮುಂದಾಳತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಸಂಪ್ರದಾಯಗಳಿಗೆ ಪುನರುಜ್ಜೀವನ ಸಿಕ್ಕಿದೆ ಎಂದರು. ವಿಶೇಷವಾಗಿ ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆತಿದ್ದು, ಅನೇಕ ದೇಶಗಳಲ್ಲಿ ಅದನ್ನು ಆಚರಿಸಲಾಗುತ್ತಿದೆ. ಆಯುರ್ವೇದಕ್ಕೂ ಮರುಪ್ರತಿಷ್ಠೆ ಸಿಗುತ್ತಿದ್ದು, ಪರಂಪರೆ ಮತ್ತು ಆಧುನಿಕತೆಯ ಸಮನ್ವಯದತ್ತ ದೇಶ ಸಾಗುತ್ತಿದೆ. ಶೀಘ್ರದಲ್ಲೇ ಭಾರತವು ವಿಶ್ವಗುರು ಆಗಲಿದೆ ಎಂಬ ಆಶಯ ವ್ಯಕ್ತಪಡಿಸಿದ ಅವರು, ಇದು ಸ್ವಾಮಿ ವೀಕಾನಂದರ ಕನಸಾಗಿದೆ. ಈಗ ನಡೆಯುತ್ತಿರುವ ಸಮ್ಮೇಳನವು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುವಂತಾಗಿದೆ ಎಂದು ಬಣ್ಣಿಸಿದರು. ತದ್ವಿದ್ಯ ಸಂಭಾಷಾ ಪರಿಷತ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಜೋಶಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಡಾ. ಅಲ್ಲಮಪ್ರಭು ಗುಡ್ಡ ಅವರು ಆಯುರ್ವೇದದಲ್ಲಿ ಹೊಸದಾಗಿ ಪ್ರಾರಂಭವಾಗಲಿರುವ 18ನೇ ಪಿಜಿ ವಿಭಾಗವಾದ ಆಯುರ್ವೇದ ಬೈಯಾಲಜಿ ಹಾಗೂ ಡಿಎಂ ಕೋರ್ಸ್‍ಗಳ ಕುರಿತು ಮಾಹಿತಿ ನೀಡಿದರು. ಡಾ. ಸೌರಭ ಕೊಕಟ್ನೂರ್ ಅವರು ಸಮ್ಮೇಳನದ ಥೀಮ್ ಹಾಗೂ ಅದರ ಪರಂಪರೆಯ ಮಹತ್ವ ವಿವರಿಸಿದರು.

ನವದೆಹಲಿಯ ಎನ್‍ಸಿಐಎಸ್‍ಎಂನ ಬೋರ್ಡ್ ಆಫ್ ಆಯುರ್ವೇದದ ಅಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡ, ಮಾಜಿ ಸಂಸದ ಐ.ಜಿ. ಸನದಿ, ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಕಾರ್ಯದರ್ಶಿ ಸಂಜೀವ ಜೋಶಿ, ವ್ಯವಸ್ಥಾಪಕ ಟ್ರಸ್ಟಿ ಹಾಗೂ ಸಮ್ಮೇಳನದ ಆಯೋಜನಾ ಕಾರ್ಯದರ್ಶಿ ಡಾ. ಸೌರಭ ಕೊಕಟ್ನೂರ್ ಸೇರಿದಂತೆ ಹಲವರಿದ್ದರು. ತದ್ವಿದ್ಯ ಸಂಭಾಷಾ ಪರಿಷತ್ ಉಪಾಧ್ಯಕ್ಷ ಡಾ. ಜೆ.ಆರ್. ಜೋಶಿ ಸ್ವಾಗತಿಸಿದರು. ಟ್ರಸ್ಟಿ ಡಾ. ನಾರಾಯಣ ಕೆ.ಆರ್. ವಂದಿಸಿದರು.