ಆರ್.ಶಿವಣ್ಣ ಅಭಿಮತ । ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಶ್ವ ಮಾನ್ಯತೆ ಪಡೆದಿವೆ. ವಿವಿಧ ಪಕ್ಷಗಳು ಗ್ಯಾರಂಟಿ ಮಾದರಿಯನ್ನು ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಳ್ಳತ್ತ ಹೆಜ್ಜೆ ಹಾಕಿವೆ. ರಾಜ್ಯದ ಆರ್ಥಿಕತೆಗೆ ಮತ್ತು ಬಡ ಕುಟುಂಬಗಳ ಶೈಕ್ಷಣಿಕ ಪ್ರಗತಿಗೆ ಪರೋಕ್ಷವಾಗಿ ಶಕ್ತಿ ತುಂಬಿದ್ದು ರಾಜ್ಯದ ಜಿಡಿಪಿ ಹೆಚ್ಚಳವಾಗಿ ಜನರ ಜೀವನಮಟ್ಟ ಸುಧಾರಣೆಯಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಅಭಿಮತ ವ್ಯಕ್ತಪಡಿಸದರು.

ನಗರದ ಜಿಲ್ಲಾ ಪಂಚಾಯತಿ ಮಿನಿ ಸಭಾಂಗಣದಲ್ಲಿ ಗುರುವಾರ ಜರುಗಿದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೇ.99ರಷ್ಟು ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರತಿವೆ. ಒಂದೆರೆಡು ಪ್ರಕರಣಗಳನ್ನು ಹಿಡಿದು ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರು ಮೊದಲು ಫಲಾನುಭವಿಗಳ ಪಟ್ಟಿ ಪರಿಶೀಲಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಲಾಭ ಸಿಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಯುವನಿಧಿ ಪಡೆಯುತ್ತಿರುವ ಅಭ್ಯರ್ಥಿಗಳ ಸಂಪೂರ್ಣ ದತ್ತಾಂಶ ಸಿದ್ಧಪಡಿಸಿಕೊಳ್ಳಿ. ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಹಾಗೂ ನೆರೆಯ ಜಿಲ್ಲೆಗಳಲ್ಲಿ ನಡೆಯುವ ಉದ್ಯೋಗ ಮೇಳಗಳಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದರು.

ಜಿಲ್ಲೆಯಲ್ಲಿ ಅನೇಕ ಶ್ರೀಮಂತರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂಬ ದೂರುಗಳಿವೆ. ಆಹಾರ ನಿರೀಕ್ಷಕರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಜಂಟಿಯಾಗಿ ಸಮೀಕ್ಷೆ ನಡೆಸಿ ಹೆಚ್ಚು ಆದಾಯ ಅಥವಾ 7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾಯಿಸಬೇಕು. ಗ್ಯಾರಂಟಿ ಯೋಜನೆಗಳ ಲಾಭ ಬಡವರಿಗೆ ತಲುಪಬೇಕು. ಅನರ್ಹರ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, ಅರ್ಹರಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ ಅನ್ನಭಾಗ್ಯ ಯೋಜನೆಯಡಿ ೧೪,೦೨,೬೬೭ ಫಲಾನುಭವಿಗಳಿಗೆ ೮೮,೭೩೬ ಮೆಟ್ರಿಕ್ ಟನ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಜುಲೈ-2023ರಿಂದ ಡಿ.2024ವರೆಗೆ ೧೩,೧೩,೮೧೭ ಫಲಾನುಭವಿಗಳಿಗೆ ಒಟ್ಟು ರು.೩೭೨ಯಷ್ಟು ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಗಳ ಕುರಿತು ಜಿಲ್ಲಾದ್ಯಂತ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮುಂದೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಣಿಕೆ, ಮಾರಾಟದ ಬಗ್ಗೆ ಆಹಾರ ನಿರೀಕ್ಷಕರು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಗ್ಯಾರಂಟಿ ಪ್ರಾಧಿಕಾರದ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಫೆಬ್ರವರಿ ಅಂತ್ಯದವರೆಗೆ ಯುವನಿಧಿ ಯೋಜನೆಯಡಿ 9,482 ಪದವೀಧರ ಫಲಾನುಭವಿಗಳು ಒಟ್ಟು 28,11,300 ರು. ಡಿಬಿಟಿ ಮೂಲಕ ಪಾವತಿಯಾಗಿದೆ. 204 ಡಿಪ್ಲೊಮಾ ಫಲಾನುಭವಿಗಳಿಗೆ 22,33,500 ರು. ಪಾವತಿಯಾಗಿದೆ. ಒಟ್ಟು 9,686 ಫಲಾನುಭವಿಗಳಿಗೆ 28,33,36,500 ರು. ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಸದಸ್ಯರಾದ ಆರ್.ಪ್ರಕಾಶ್, ಎಚ್.ಟಿ.ಹನುಮಂತಪ್ಪ, ಅಬ್ದುಲ್ಲಾ ಶಾ ವಲಿ, ಮಹಮದ್ ಇಸ್ಮಾಯಿಲ್, ಎಲ್.ಇಂದಿರಾ, ಪಿ.ಆರ್.ಶಿವಕುಮಾರ್, ಟಿ.ಪ್ರಕಾಶ್, ಗದ್ದಿಗೆ ಬಿ.ತಿಪ್ಪೇಸ್ವಾಮಿ, ಜಿಪಂ ಸಿಪಿಒ ಗಾಯಿತ್ರಿ ಯೋಜನಾ ನಿರ್ದೇಶಕಿ ಜಯಲಕ್ಷ್ಮಿ ಇದ್ದರು.ಫಲಾನುಭವಿಗಳ ಪ್ರತ್ಯೇಕ ದತ್ತಾಂಶ ಸಿದ್ಧಪಡಿಸಿ

ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ವಿವರಗಳನ್ನು ಒಳಗೊಂಡ ಪ್ರತ್ಯೇಕ ದತ್ತಾಂಶವನ್ನು ವಾರ್ಡ್ ಮತ್ತು ಗ್ರಾಮವಾರು ಸಿದ್ಧಪಡಿಸಬೇಕು. ಈ ದತ್ತಾಂಶ ಸಂಗ್ರಹಣೆಯಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದು ಸರ್ಕಾರದ ಮಹತ್ವಾಕಾಂಕ್ಷೆಯ ಕೆಲಸವಾಗಿದ್ದು, ಫಲಾನುಭವಿಗಳ ನಿಖರ ಸಂಖ್ಯೆ ಮತ್ತು ತಲುಪಿರುವ ಸೌಲಭ್ಯಗಳ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಪ್ರತಿ ತಿಂಗಳು ಹಣ ಜಮೆಯಾಗುತ್ತಿರುವ ಬಗ್ಗೆ ಫಲಾನುಭವಿಗಳ ಅಭಿಪ್ರಾಯವನ್ನೂ ದಾಖಲಿಸುವುದು ಸೂಕ್ತ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ತಿಳಿಸಿದರು.