ಸಾರಾಂಶ
ಅರಸೀಕೆರೆ ಹೋಬಳಿಯಲ್ಲಿ 166 ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು.
ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಹೋಬಳಿಯ ಅರಸೀಕೆರೆ, ಉಚ್ಚಂಗಿದುರ್ಗ, ಹೊಸಕೋಟೆ, ಕಂಚಿಕೆರೆ, ತೌಡೂರು, ಮಾದಿಹಳ್ಳಿ, ಹಿರೇಮೇಗಳಗೆರೆ ಹೋಬಳಿಗಳಲ್ಲಿ ಗಣೇಶ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಅರಸೀಕೆರೆ ಹೋಬಳಿಯಲ್ಲಿ 166 ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮುತ್ತೈದೆಯರು, ಹೆಣ್ಣು ಮಕ್ಕಳು ಬೆಳಗ್ಗೆಯಿಂದಲೇ ಉಪವಾಸವಿದ್ದು, ಹೊಸ ಬಟ್ಟೆ ತೊಟ್ಟು ಹಬ್ಬದ ಕಾರ್ಯಗಳಲ್ಲಿ ತೊಡಗಿದ್ದರು.ನಾನಾ ಹೂಗಳಿಂದ, ಜೋಳದ ತೆನೆ, ಮಾವಿನತೋರಣ, ಚೆಂಡು ಹೂವಿನ ಹಾರಗಳಿಂದ ಮಂಟಪ ಮಾಡಿ ಆ ಮಂಟಪದಲ್ಲಿ ಮೊದಲು ಗೌರಿಯನ್ನು ಕೂಡಿಸಿ ಗೌರಿಯ ಪಕ್ಕದಲ್ಲಿ ಗಣೇಶನನ್ನು ಕೂಡಿಸಿ ವಿವಿಧ ಹೂಗಳು, ಗೆಜ್ಜೆ ವಸ್ತ್ರ, ಬಿಳಿ ಎಕ್ಕದ ಹೂವಿನ ಹಾರ, 21 ಗರಿಕೆ ಪತ್ರಿಯ ಹುಡಿಯಿಂದ ಗೌರಿ ಗಣೇಶನನ್ನು ಪೂಜಿಸಲಾಯಿತು.
ಗೌರಿ ಗಣೇಶನಿಗೆ ಪ್ರಿಯವಾದ ಕಡುಬು, ಮೋದಕ, ಕರ್ಚಿಕಾಯಿ, ಬಗೆ ಬಗೆಯ ಹಣ್ಣುಗಳನ್ನು ನೈವೇದ್ಯ ಮಾಡಲಾಯಿತು. ಪೂಜೆಯ ನಂತರ ಮನೆಗೆ ಬಂದಂತಹ ಹೆಣ್ಣು ಮಕ್ಕಳಿಗೆ ಅರಿಶಿನ,ಕುಂಕುಮ,ಬಾಗಿನ, ಉಡಿ ತುಂಬಿದರು.ಇಲ್ಲಿ ಪ್ರತಿ ಮನೆ ಹಾಗೂ ಬೀದಿ, ಪ್ರಮುಖ ವೃತ್ತಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶನನ್ನು ನೋಡಲು ಜಿಟಿ ಜಿಟಿ ಮಳೆಯಲ್ಲಿಯೇ ಜನರು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು, ಮಕ್ಕಳು ಹೊಸ ಬಟ್ಟೆ ಧರಿಸಿ, ಪಟಾಕಿ ಸಿಡಿಸಿ ಹಬ್ಬದ ಸಂಭ್ರಮಪಟ್ಟರು.
ಗಣೇಶ ಹಬ್ಬದ ಪ್ರಯುಕ್ತ ಹಲವು ಕಡೆ ರಂಗೋಲಿ ಸ್ಪರ್ದೆ, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಹರಪನಹಳ್ಳಿ ತಾಲೂಕಿನ ಅರಸಿಕೇರಿಯಲ್ಲಿ ಪ್ರತಿಷ್ಠಾಪಿಸಿರುವ ಸುಂದರ ಗಣೇಶ ಮೂರ್ತಿ.