ಹಂಪಿಯಲ್ಲಿ ವೈಭವದ ಕಾರ್ತಿಕೋತ್ಸವ

| Published : Dec 29 2023, 01:30 AM IST

ಸಾರಾಂಶ

ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಸಮಯದಲ್ಲಿ ಕಾಣಿಕೆಯಾಗಿ ಸಲ್ಲಿಸಿದ ನವರತ್ನ ಖಚಿತ ಸುವರ್ಣಮುಖ ಕೀರಿಟದಿಂದ ವಿರೂಪಾಕ್ಷೇಶ್ವರ ಸ್ವಾಮಿಗೆ ಅಲಂಕಾರಗೈದು ವಿಶೇಷ ಪೂಜೆ ಸಲ್ಲಿಸಲಾಗಿತ್ತು.

ಹೊಸಪೇಟೆ: ಫಲಪೂಜಾ ಮಹೋತ್ಸವದ ನಿಮಿತ್ತ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಗುರುವಾರ ರಾತ್ರಿ ಸಹಸ್ರಾರು ಭಕ್ತರು ಕಾರ್ತಿಕ ದೀಪ ಬೆಳಗಿಸಿದರು.ಪಂಪಾ ವಿರೂಪಾಕ್ಷೇಶ್ವರ ಮತ್ತು ಪಂಪಾಂಬಿಕೆ ದೇವಿಯ (ನಿಶ್ಚಿತಾರ್ಥ) ಫಲಪೂಜಾ ಕಾರ್ಯಕ್ರಮದ ನಿಮಿತ್ತ ಬೆಳಗ್ಗೆಯಿಂದಲೇ ವಿರೂಪಾಕ್ಷೇಶ್ವರ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಸಮಯದಲ್ಲಿ ಕಾಣಿಕೆಯಾಗಿ ಸಲ್ಲಿಸಿದ ನವರತ್ನ ಖಚಿತ ಸುವರ್ಣಮುಖ ಕೀರಿಟದಿಂದ ವಿರೂಪಾಕ್ಷೇಶ್ವರ ಸ್ವಾಮಿಗೆ ಅಲಂಕಾರಗೈದು ವಿಶೇಷ ಪೂಜೆ ಸಲ್ಲಿಸಲಾಗಿತ್ತು.ಫಲಪೂಜಾ ಮಹೋತ್ಸವದ ಹಿನ್ನೆಲೆಯಲ್ಲಿ ಹಂಪಿಗೆ ಆಗಮಿಸಿದ ಸಹಸ್ರಾರು ಭಕ್ತರು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ- ಸಂಧ್ಯಾವಂದನೆ ಪೂರ್ಣಗೊಳಿಸಿದರು. ಬಳಿಕ ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದರು. ಹೂವು- ಹಣ್ಣು, ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು.

ಆಂಧ್ರಪ್ರದೇಶದ ಅನಂತಪುರ, ಕರ್ನೂಲ್, ಕಡಪ, ರಾಜ್ಯದ ಬಳ್ಳಾರಿ, ಹಾವೇರಿ, ರಾಯಚೂರು, ಗದಗ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.