ವೈಭವದಿಂದ ನೆರವೇರಿದ ಶೇರ್ತಿಸೇವೆ; ಕಣ್ತುಂಬಿಕೊಂಡ ಭಕ್ತರು

| Published : Apr 15 2025, 12:59 AM IST

ವೈಭವದಿಂದ ನೆರವೇರಿದ ಶೇರ್ತಿಸೇವೆ; ಕಣ್ತುಂಬಿಕೊಂಡ ಭಕ್ತರು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕೃಷ್ಣ-ಬಲರಾಮರು ದ್ವಾಪರಯುಗದಲ್ಲಿ ತಾವು ನಿತ್ಯ ಆರಾಧಿಸುತ್ತಿದ್ದ ಉತ್ಸವಮೂರ್ತಿಯನ್ನು ಯದುಗಿರಿ ದೇವಾಲಯಕ್ಕೆ ತಂದು ಮೂಲಮೂರ್ತಿಯೊಡನೆ ಪೂಜೆಮಾಡಲು ಬ್ರಹ್ಮೋತ್ಸವ ನಡೆಸಲು ಅರ್ಪಿಸಿದರು ಎಂಬ ಪ್ರತೀತಿಯಿದ್ದು, ವರ್ಷಕ್ಕೊಂದು ದಿನ ಮಾತ್ರ ಮೂಲಮೂರ್ತಿಯೊಡನೆ ಉತ್ಸವಮೂರ್ತಿಯನ್ನು ಬ್ರಹ್ಮೋತ್ಸವ ಮುಗಿದ ಮರುದಿನ ಆರಾಧಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಯದುಗಿರಿಯ ಅದಿವೈವ ಚೆಲುವನಾರಾಯಣಸ್ವಾಮಿಯನ್ನು ಶ್ರೀಕೃಷ್ಣ-ಬಲರಾಮರು ದ್ವಾಪರಯುಗದಲ್ಲಿ ಆರಾಧಿಸಿದ ಪ್ರತೀಕವಾಗಿ ಸೋಮವಾರ ವೈಭವದಿಂದ ನೆರವೇರಿದ ಶೇರ್ತಿಸೇವೆಯ ವಿಶೇಷ ಕ್ಷಣಗಳನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ಶ್ರೀಕೃಷ್ಣ-ಬಲರಾಮರು ದ್ವಾಪರಯುಗದಲ್ಲಿ ತಾವು ನಿತ್ಯ ಆರಾಧಿಸುತ್ತಿದ್ದ ಉತ್ಸವಮೂರ್ತಿಯನ್ನು ಯದುಗಿರಿ ದೇವಾಲಯಕ್ಕೆ ತಂದು ಮೂಲಮೂರ್ತಿಯೊಡನೆ ಪೂಜೆಮಾಡಲು ಬ್ರಹ್ಮೋತ್ಸವ ನಡೆಸಲು ಅರ್ಪಿಸಿದರು ಎಂಬ ಪ್ರತೀತಿಯಿದ್ದು, ವರ್ಷಕ್ಕೊಂದು ದಿನ ಮಾತ್ರ ಮೂಲಮೂರ್ತಿಯೊಡನೆ ಉತ್ಸವಮೂರ್ತಿಯನ್ನು ಬ್ರಹ್ಮೋತ್ಸವ ಮುಗಿದ ಮರುದಿನ ಆರಾಧಿಸಲಾಗುತ್ತಿದೆ. ಸೋಮವಾರ ಶೇರ್ತಿಸೇವೆ ನಡೆಸಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ವೈರಮುಡಿ ಬ್ರಹ್ಮೋತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ಕೊನೆ ದಿನ ಸಿಹಿಯೊಂದಿಗೆ ಅನ್ನಪ್ರಸಾದ ನೀಡುವ ವಿಶಿಷ್ಠ ‘ಅನ್ನಕೋಟಿ’ ಅಥವಾ ಮಹಾನಿವೇದನ ಸಹ ಅರ್ಥಪೂರ್ಣವಾಗಿ ನೆರವೇರಿತು. ಪಂಚಾಮೃತ, ಕ್ಷೀರಾ ಹಾಗೂ ಕದಂಬವನ್ನು ತಯಾರಿಸಿ ಚೆಲುವನಾರಾಯಣನಿಗೆ ಮಹಾನಿವೇದನ ಮಾಡಿ ನೆರೆದಿದ್ದ ಸಹಸ್ರಾರು ಭಕ್ತರಿಗೆ ವಿತರಿಸಲಾಯಿತು.

ಇದೇ ದಿನ ಬೆಟ್ಟದೊಡೆಯ ಯೋಗನರಸಿಂಹಸ್ವಾಮಿ ಹಾಗೂ ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರಿಗೆ ವೈರಮುಡಿ ಬ್ರಹ್ಮೋತ್ಸವ ಮುಕ್ತಾಯದ ಅಂಗವಾಗಿ ವೇದಮಂತ್ರಗಳೊಂದಿಗೆ ವೈಭವದಿಂದ ಮಹಾಭಿಷೇಕ ನೆರವೇರಿತು. ನೂರಾರು ಸಂಖ್ಯೆಯ ಭಕ್ತರು ಮಹಾಭಿಷೇಕದಲ್ಲಿ ಭಾಗವಹಿಸಿ ದರ್ಶನಪಡೆದರು.

ರಾಜಮುಡಿ ಮರಳಿ ಖಜಾನೆಗೆ:

ಏ.7ರ ವೈರಮುಡಿ ಉತ್ಸವದಿಂದ ಪಟ್ಟಾಭಿಷೇಕ ಮಹೋತ್ಸವದವರೆಗೆ 7 ದಿನಗಳ ಕಾಲ ಜಾತ್ರಾ ಅವಧಿಯಲ್ಲಿ ಚೆಲುವನಾರಾಯಣಸ್ವಾಮಿ ವಿವಿಧ ಉತ್ಸವಗಳಲ್ಲಿ ಅಲಂಕರಿಸಿದ್ದ ರಾಜಮುಡಿ ಮತ್ತು ಇತರ ವಜ್ರಖಚಿತ ಆಭರಣಗಳನ್ನು ಜಿಲ್ಲಾ ಖಜಾನೆಗೆ ಕಳುಹಿಸಿಕೊಡಲಾಯಿತು.

ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಕಿರೀಟ ಮತ್ತು ಆಭರಣಗಳನ್ನು ಪರಿಶೀಲಿಸಿದ ನಂತರ ಸ್ಥಾನೀಕರು ಮತ್ತು ಅರ್ಚಕ ಪರಿಚಾರಕರಿಂದ ಪಡೆದು ಮೊಹರುಮಾಡಿ ಪೊಲೀಸ್ ಭದ್ರತೆಯೊಂದಿಗೆ ಖಜಾನೆಗೆ ಮರಳಿಸಲಾಯಿತು.

ಈ ವೇಳೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಕರಗಂರಾಮಪ್ರಿಯ, ತಿರುನಾರಾಯಣ ಅಯ್ಯಂಗಾರ್, ಮುಕುಂದನ್, ಶ್ರೀರಾಮನ್ ಅರ್ಚಕ ವರದರಾಜಭಟ್ಟರ್, ಪರಿಚಾರಕ ಎಂ.ಎನ್ ಪಾರ್ಥಸಾರಥಿ ಹಲವರು ಇದ್ದರು.