ಸಾರಾಂಶ
- 11 ದಿನ ಕ್ರಿಕೆಟ್, ವಾಲಿಬಾಲ್, ಖೊ ಖೋ, ಥ್ರೋ ಬಾಲ್ ಪಂದ್ಯಾವಳಿ ಆಯೋಜನೆ: ಡಾ.ಕಿರಣ್ ಕುಮಾರ್- - - ಕನ್ನಡಪ್ರಭ ವಾರ್ತೆ ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ವತಿಯಿಂದ ಫೆ.4ರಿಂದ 15ರವರೆಗೆ ಜಿಎಂ ವಿಶ್ವವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಜಿಎಂ ಲೀಗ್ ಕ್ರೀಡಾ ಹಬ್ಬ ನಡೆಯಲಿದೆ. 11 ದಿನಗಳ ಕಾಲ ಕ್ರಿಕೆಟ್, ವಾಲಿಬಾಲ್, ಖೊ ಖೋ, ಥ್ರೋ ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ನಿರ್ದೇಶಕ ಡಾ. ಎಚ್.ಎಸ್.ಕಿರಣ್ ಕುಮಾರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.4ರಂದು ಲೀಗ್‌ಗೆ ಚಾಲನೆ ದೊರೆಯಲಿದೆ. ಕುಸ್ತಿಪಟು, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಾದ ಕಾರ್ತಿಕ್ ಜಿ. ಕಾಟಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು ಅಧ್ಯಕ್ಷತೆ ವಹಿಸುವರು. ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ ಕುಲಸಚಿವ ಡಾ. ಬಿ.ಎಸ್. ಸುನೀಲ್ ಕುಮಾರ, ಜಿಎಂ ತಾಂತ್ರಿಕ ಮಹಾವಿದ್ಯಾಲಯ ಆಡಳಿತಾಧಿಕಾರಿ ವೈ.ಯು. ಸುಭಾಷ್ ಚಂದ್ರ ಉಪಸ್ಥಿತರಿರುವರು ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ವಿವಿಧ ವಿಭಾಗಗಳ ಡೀನ್ ಗಳು, ನಿರ್ದೇಶಕರು, ಮುಖ್ಯಸ್ಥರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗದವರು ಕ್ರೀಡಾ ಸಂಯೋಜಕರು, ವಿದ್ಯಾರ್ಥಿಗಳು ಭಾಗವಹಿಸುವರು. ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಸರ್ವತೋಮುಖ ಬೆಳವಣಿಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹುಮುಖ್ಯವಾಗಿವೆ. ಈ ನಿಟ್ಟಿನಲ್ಲಿ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು ತಮ್ಮ ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರ ಕನಸಿನಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಉನ್ನತ ಶಿಕ್ಷಣ ನೀಡುವ ಜೊತೆಗೆ ಅವರ ಹೆಸರಿನಲ್ಲಿ ಜಿಎಂ ಲೀಗ್ ಕ್ರೀಡಾ ಪಂದ್ಯಾವಳಿಗಳ ಮೂಲಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ.ಲಿಂಗರಾಜು, ಕುಲಪತಿ ಡಾ.ಎಸ್.ಆರ್.ಶಂಕಪಾಲ್ ಈ ಲೀಗ್ ನ ರುವಾರಿಗಳಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಲೀಗ್ ನಡೆಸುತ್ತಿದ್ದು, ಹರಾಜು ಪ್ರಕ್ರಿಯೆ ನಡೆಸಿ ಫ್ರಾಂಚೈಸಿಗಳ ಮೂಲಕ ಆಟಗಾರರ ಆಯ್ಕೆಯಾಗಿದೆ. ಜಿಎಂ ವಿಶ್ವವಿದ್ಯಾಲಯದ ಸಹ ಕುಲಪತಿಗಳಾದ ಡಾ.ಎಚ್.ಡಿ.ಮಹೇಶಪ್ಪ, ಜಿಎಂಐಟಿ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ, ಜಿಎಂ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಗಿರೀಶ್ ಬೋಳಕಟ್ಟಿ, ಮುಖ್ಯ ಹಣಕಾಸು ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ನಿರ್ದೇಶಕರು, ಡೀನ್ ಗಳೇ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳ ಫ್ರಾಂಚೈಸಿಗಳಾಗಿದ್ದಾರೆ. ಜಿಲ್ಲೆ, ತಾಲೂಕು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿರುವ ವಿದ್ಯಾರ್ಥಿಗಳ ಒಳಗೊಂಡಂತೆ ಜಿಎಂ ಲೀಗ್‌ಗೆ ಆಟಗಾರರನ್ನು ಆಯ್ಕೆಗೊಳಿಸಲಾಗಿದೆ ಎಂದು ತಿಳಿಸಿದರು.
ಕ್ರಿಕೆಟ್ ವಂದ್ಯಾವಳಿಯಲ್ಲಿ ಒಟ್ಟು 9 ತಂಡಗಳಿದ್ದು, ಪ್ರತಿ ತಂಡದಲ್ಲಿ 20 ಆಟಗಾರರಿದ್ದಾರೆ. ವಾಲಿಬಾಲ್‌ನಲ್ಲಿ ಒಟ್ಟು 8 ತಂಡಗಳಿದ್ದು, ಪ್ರತಿ ತಂಡದಲ್ಲಿ 10 ಆಟಗಾರರು ಇದ್ದಾರೆ. ಖೋ ಖೋ ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗದಲ್ಲಿ ತಲಾ 4 ತಂಡಗಳಿವೆ. ಈ ಎರಡು ವಿಭಾಗಗಳ ಪ್ರತಿ ತಂಡಗಳಲ್ಲಿ 12 ಆಟಗಾರರು ಇದ್ದಾರೆ. ಥ್ರೋಬಾಲ್ ಮಹಿಳಾ ವಿಭಾಗದಲ್ಲಿ 6 ತಂಡಗಳಿದ್ದು, ಪ್ರತಿ ತಂಡದಲ್ಲೂ 8 ಆಟಗಾರರು ಇದ್ದಾರೆ. ಈ ಲೀಗ್‌ನಲ್ಲಿ ಹೊರಗಿನ ಇತರೆ ಕಾಲೇಜುಗಳ ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಎಂ ವಿ.ವಿ. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಜಿ.ಬಿ.ಅಜ್ಜಯ್ಯ, ಗುರುಶಂಕರ್, ಬಿ.ಇ.ರಾಜೇಶ ಇದ್ದರು.
- - - -3ಕೆಡಿವಿಜಿ40.ಜೆಪಿಜಿ:ದಾವಣಗೆರೆಯಲ್ಲಿ ಜಿಎಂ ವಿ.ವಿ.ಯಿಂದ ಜಿಎಂ ಲೀಗ್ ಕ್ರೀಡಾ ಹಬ್ಬ ಆಯೋಜಿಸಿರುವ ಬಗ್ಗೆ ಡಾ. ಎಚ್.ಎಸ್. ಕಿರಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.