ಜಿ.ಎಂ. ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ: ವಾರ್ಷಿಕ ಸಂಚಿಕೆ ಪರಿಕ್ರಮ ಬಿಡುಗಡೆ

| Published : Feb 12 2024, 01:35 AM IST

ಜಿ.ಎಂ. ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ: ವಾರ್ಷಿಕ ಸಂಚಿಕೆ ಪರಿಕ್ರಮ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತನೇ ತರಗತಿಯ ವಿದ್ಯಾರ್ಥಿಗಳು ಜಿಎಂ ನಲ್ಲಿ ಕಳೆದ ಅಮೋಘ ಕ್ಷಣಗಳನ್ನು ಭಾವನಾತ್ಮಕವಾಗಿ ಹಂಚಿಕೊಂಡರು. ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಕೈಪಿಡಿ, ವಾರ್ಷಿಕ ಸಂಚಿಕೆ ಜಿ ಎಮ್ ಪರಿಕ್ರಮ ಮತ್ತು ಜಿಎಂ ಟೈಮ್ಸ್ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಆಶೀರ್ವಚನ ಕಾರ್ಯಕ್ರಮ ಶನಿವಾರ ನೆರವೇರಿತು.

ಉಡುಪಿ ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಮಲ್ಪೆ ಲಕ್ಷ್ಮೀನಾರಾಯಣ ಸಾಮಗ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಹತ್ತನೇ ತರಗತಿಯಿಂದ ಬೀಳ್ಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ದೀಪವನ್ನು ನೀಡಿ ಹಾರೈಸಿ ಮಾತನಾಡಿ, ಅನುಭವಗಳು ನಮ್ಮ ಜೀವನದ ಶ್ರೇಷ್ಠ ಶಿಕ್ಷಕ. ಹೇಡಿಗಳಿಗೆ ಈ ಭೂಮಿಯ ಮೇಲೆ ಬದುಕಲು ಅರ್ಹತೆಗಳಿಲ್ಲ, ಬರುವುದನ್ನೆಲ್ಲ ಎದುರಿಸಿ ಧೈರ್ಯವಾಗಿ ಮುನ್ನಡೆಯಬೇಕು. ನಮ್ಮನ್ನು ಹೊಗಳದೆ ಇತರರನ್ನು ತೆಗಳದೆ ಹೊಂದಾಣಿಕೆಯಿಂದ ಜೀವನವನ್ನು ನಡೆಸಬೇಕೆಂದರು.

ಜಿಎಂನ ಹಳೆ ವಿದ್ಯಾರ್ಥಿ, ಸೈಬರ್ ಭದ್ರತಾ ಸಲಹೆಗಾರ ಪ್ರಿತ್ವೇಶ್ ಕೆ. ಮಾತನಾಡಿ, ಇದು ನನಗೆ ಹೆಮ್ಮೆಯ ಕ್ಷಣ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವೇ ನನ್ನ ಸಾಧನೆಯ ಅಡಿಗಲ್ಲು. ಸೋಲಿನ ಪಾಠದೊಂದಿಗೆ ನಮ್ಮ ಗುರಿಯ ಕಡೆಗೆ ಗಮನ ಹರಿಸಬೇಕೆಂದರು.

ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮತ್ತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಬೀಳ್ಕೊಂಡ ಎಲ್ಲಾ ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಜಿಎಂ ನಲ್ಲಿ ಕಳೆದ ಅಮೋಘ ಕ್ಷಣಗಳನ್ನು ಭಾವನಾತ್ಮಕವಾಗಿ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಕೈಪಿಡಿ, ವಾರ್ಷಿಕ ಸಂಚಿಕೆ ಜಿ ಎಮ್ ಪರಿಕ್ರಮ ಮತ್ತು ಜಿಎಂ ಟೈಮ್ಸ್ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು.

ಅತ್ಯಾಕರ್ಷಕ ವಸ್ತ್ರ ವಿನ್ಯಾಸದೊಂದಿಗೆ ಆಗಮಿಸಿದ ವಿದ್ಯಾರ್ಥಿಗಳು ಅಂತಿಮವಾಗಿ ಜಿಎಂ ಒಳಾಂಗಣದಲ್ಲಿ ಕೇಕನ್ನು ಕತ್ತರಿಸಿ ನೃತ್ಯವನ್ನು ಮಾಡುವುದರ ಮೂಲಕ ಅಮೂಲ್ಯ ಕ್ಷಣಗಳನ್ನು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.