ಸಾರಾಂಶ
ಚಾಮರಾಜನಗರ : ತಾಲೂಕಿನ ಹೆಗ್ಗೋಠಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಳಿಕಲ್ಲು ಕ್ರಷರ್‌ದಾರರು ಗೋಮಾಳಗಳನ್ನು ಅತಿಕ್ರಮಣ ಮಾಡಿಕೊಂಡಿರುವುದು ಸೇರಿದಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರಿಗೆ ಜೂ.24ರಂದು ಘೇರಾವ್ ಹಾಕಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೆಗ್ಗೋಠಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಳಿಕಲ್ಲು ಕ್ರಷರ್‌ದಾರರು ಗೋಮಾಳಗಳನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ, ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನಾವು ಲೋಕಾಯುಕ್ತಕ್ಕೆ ದೂರು ನೀಡಿದ ಅವರು ಪರಿಶೀಲಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ ತಹಸೀಲ್ದಾರ್‌ರವರು ಬಂದು ಪರಿಶೀಲಿಸಿ, ಅತಿಕ್ರಮಣವಾಗಿರುವ ಬಗ್ಗೆ ವರದಿ ಸಲ್ಲಿಸಿದರೂ, ಈವರೆಗೂ ಅದನ್ನು ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡದೇ ಮಾಲೀಕರೊಂದಿಗೆ ಶಾಮೀಲಾಗಿ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.
ಜನಸಂಖ್ಯೆ ಹಾಗೂ ಜಾನುವಾರುಗಳಿಗೆ ಅನುಸಾರವಾಗಿ ಇಂತಿಷ್ಟು ಗೋಮಾಳ ಇರಬೇಕೆಂಬ ಸರ್ಕಾರದ ಆದೇಶವಿದ್ದರೂ ಇದನ್ನು ಇಲ್ಲಿ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ, ಒಂದು ಕಡೆ ಕೈಗಾರಿಕಾ ಪ್ರದೇಶ ಇನ್ನೊಂದೆಡೆ ಗೋಮಾಳಗಳ ಅತಿಕ್ರಮಣದಿಂದಾಗಿ ರೈತರಿಗೆ ಬಹಳ ತೊಂದರೆಯಾಗಿ ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದೆ ಎಂದರು.
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಇದರ ನೇರ ಪರಿಣಾಮ ರೈತರ ಮೇಲೆ ಬಿದ್ದಿದೆ, ರೈತರು ಉಪಯೋಗಿಸುವ ಅಗತ್ಯ ವಸ್ತುಗಳು ಮತ್ತು ಬಿತ್ತನೆ ಬೀಜಗಳ ಬೆಲೆ ಹೆಚ್ಚಾಗಿದೆ ಆದ್ದರಿಂದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ನರೇಗಾದಲ್ಲಿ ಭಾರಿ ಅಕ್ರಮ ನಡೆಯುತ್ತಿದೆ, ಬೆಳಗ್ಗೆ ಸಾಯಂಕಾಲ ಭಾವಚಿತ್ರ ತೋರಿಸಿದರೆ ಸಾಕು ಕೆಲಸ ಮಾಡದಿದ್ದರೂ ಬಿಲ್ ಆಗುತ್ತದೆ, ಇದರಲ್ಲಿ ಪಿಡಿಒಗಳ ಕೈವಾಡವಿದೆ, ನರೇಗಾದಲ್ಲಿ ಜಿಲ್ಲೆ ದುಡ್ಡು ಮಾಡುವುದರಲ್ಲಿ ೩ನೇ ಸ್ಥಾನದಲ್ಲಿದೆ ಎಂದು ಆರೋಪಿಸಿದರು.
ಉಸ್ತುವಾರಿ ಸಚಿವರಾಗಿ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಜೂ. ೨೪ ರಂದು ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದು, ಗಡಿ ಭಾಗದಲ್ಲೇ ಅವರಿಗೆ ಘೇರಾವ್ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿ, ಗೋ ಬ್ಯಾಕ್ ಘೋಷಣೆಗಳನ್ನು ಕೂಗಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಗ್ಗೋಠಾರ ವಿಜಯಕುಮಾರ್, ಮೇಲಾಜಿಪುರ ಕುಮಾರ್, ಪಾಳ್ಯ ಶಿವಮೂರ್ತಿ, ಹೆಗ್ಗವಾಡಿ ಮಹದೇವಸ್ವಾಮಿ ಇದ್ದರು.