ಸಾರಾಂಶ
ಕನ್ನಡಪ್ರಭಾವ ವಾರ್ತೆ ಯಾದಗಿರಿ/ಗುರುಮಠಕಲ್
ಕಳೆದ ಲೋಕಸಭೆ ಚುನಾವಣೆಯಲ್ಲಿ ಡಾ. ಉಮೇಶ ಜಾಧವ್ ಗೆದ್ದ ನಂತರ ಒಂದು ಸಲವೂ ಮತಕ್ಷೇತ್ರದ ಕಡೆ ಬಾರದ ಅವರು ಮತ್ತೆ ಮತಯಾಚಿಸಲು ಬಂದಿರುವುದಕ್ಕೆ ಇಲ್ಲಿನ ಬಿಜೆಪಿ ಮುಖಂಡರು ಆಕ್ರೋಶಗೊಂಡು "ಗೋಬ್ಯಾಕ್ " ಬಿಸಿ ತಟ್ಟಿಸಿದರು.ಪಟ್ಟಣದ ಖಾಸಾಮಠ ಆವರಣದಲ್ಲಿ ಹಾಗೂ ಖಾಸಗಿ ಪಂಕ್ಷನ್ ಹಾಲ್‌ನಲ್ಲಿ ನಡೆದ ಬಿಜಿಪಿ ಮುಖಂಡರ ಸಭೆಯಲ್ಲಿ ಗುರುಮಠಕಲ್ ಪಟ್ಟಣದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಸಭೆಗೆ ಬಹಿಷ್ಕಾರ ಹೇಳಿದರು. "ಇಷ್ಟು ದಿನ ಎಲ್ಲಿದ್ದೀರಿ? ಯಾವ ಮುಖ ಹೊತ್ತುಕೊಂಡು ನಿಮ್ಮ ಪರವಾಗಿ ಮತಯಾಚಿಸಬೇಕು? ಜನರು ನಮಗೆ ಉಗುಳುತ್ತಾರೆ, ನೀವು ವಾಪಸ್ ಹೋಗಿ ಎಂದು ಕಾರ್ಯಕರ್ತರು ಜಾಧವ್ ಜೊತೆಗೆ ವಾಗ್ವಾದ ನಡೆಸಿ ಸಭೆಯಿಂದ ಹೊರ ನಡೆದರು.
ಉದ್ಯೋಗದ ಕುರಿತು ಸುಳ್ಳು ಭರವಸೆ?: ಮತಕ್ಷೇತ್ರದಲ್ಲಿ ಜವಳಿ ಪಾರ್ಕ್ ಗಾಗಿ ಅನುದಾನ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದೆ. ಒಂದು ಲಕ್ಷ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ಮತಯಾಚನೆಯಲ್ಲಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ಜವಳಿ ಪಾರ್ಕ್ ಕಡೇಚೂರ -ಬಾಡಿಯಾಳ ಕೈಗಾರಿಕೆ ವಲಯದಲ್ಲಿ ಮಂಜೂರು ಆಗಿತ್ತು. ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವಧಿಯಲ್ಲಿಯೇ ರದ್ದು ಆಗಿದೆ. ಮತ್ತೆ ಪುನರಾಂಭ ಮಾಡಲು ಕಸರತ್ತು ನಡೆದಿದೆ. ಆದರೆ, ಇನ್ನು ಅನುದಾನ ಮಂಜೂರು ಆಗಲಿದ್ದ ಕೈಗಾರಿಕೆಯಲ್ಲಿ ಉದ್ಯೋಗ ಹೇಗೆ ನೀಡುತ್ತಾರೆ? ಇದು ಜನರಿಗೆ ದಿಕ್ಕುತಪ್ಪಿಸುವ ಹೇಳಿಕೆ ಜಾಧವ ನೀಡುತ್ತಿದ್ದಾರೆ ಎಂಬ ಟೀಕೆಗಳು ಮೂಡಿವೆ.ವಾಂತಿಬೇಧಿ ಸಾವು ಪ್ರಕರಣಗಳು: ಸಾಂತ್ವನಕ್ಕೂ ಬಾರದ ಜಾಧವ್!: ಕಳೆದ ಬೇಸಿಗೆಯಲ್ಲಿ ತಾಲೂಕಿನ ಅನಪೂರ ಗ್ರಾಮದಲ್ಲಿ ಕಲುಷಿತ ನೀರಿನಿಂದ ವಾಂತಿ-ಬೇಧಿ ಉಲ್ಬಣ ಆಗಿ ಮೂವರು ಮೃತಪಟ್ಟಿದ್ದರು. ಹಿಮ್ಲಾಪೂರ, ಚಿನ್ನಕಾರ್, ದಂತಾಪೂರ್, ಗಾಜರಕೋಟ್ ಮುಂತಾದ ಗ್ರಾಮಗಳಲ್ಲಿ ನೂರಾರು ಜನರು ವಾಂತಿ-ಬೇಧಿ ಪ್ರಕರಣಗಳಿಂದ ತಾಲೂಕೇ ತತ್ತರಿಸಿದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಸಾಂತ್ವನ ಹೇಳಲು ಬಾರದ ಜಾಧವ್ ಮೇಲೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕೈಗಾರಿಕೆಯಲ್ಲಿ ಬೆಂಕಿ ಸ್ಫೋಟದಲ್ಲಿ ಸತ್ತರೂ ಕ್ಯಾರೇ ಎನ್ನದ ಜಾಧವ್: ಸೈದಾಪೂರದಲ್ಲಿ ಕೈಗಾರಿಕೆ ವಲಯದಲ್ಲಿ ಬೆಂಕಿ ಸ್ಫೋಟ ಆಗಿ 6 ಜನ ಸತ್ತರು. ತಾಲೂಕಿನಲ್ಲಿ ಕುಡಿಯುವ ನೀರಿನಿಂದ ತತ್ತರಿಸಿದರೂ ಜಾಧವ್ ಕ್ಯಾರೇ ಎನ್ನದಿರುವಾಗ, ಈಗ ಚುನಾವಣೆ ಪ್ರಚಾರದಲ್ಲಿ ಬಂದು ತಮ್ಮ ಶೂನ್ಯ ಸಾಧನೆ ಮರೆ ಮಾಚಲು ಮೋದಿ ವಿಚಾರ ಪ್ರಚಾರ ಮಾಡುತ್ತಿದ್ದು, ಮೋದಿ ಹೆಸರಿನಲ್ಲಿ ಗೆಲ್ಲಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಮುಖಂಡರೇ ಲೇವಡಿ ಮಾಡುತ್ತಿದ್ದಾರೆ.ಜೆಡಿಎಸ್ ಮೈತ್ರಿ ಸಹಕಾರ ಇಲ್ಲವೇ?: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಜೋರಾಗಿ ಜಂಟಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇಲ್ಲಿನ ಬಿಜೆಪಿ ಲೋಕಸಭೆ ಅಭ್ಯರ್ಥಿ ಉಮೇಶ ಜಾಧವ್ ಗುರುಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ವಿಶ್ವಾಸ ಗಳಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಶಾಸಕರು ಬಂಜಾರಾ ಸಮಾಜದಿಂದ ಪಕ್ಷೇತರವಾಗಿ ಅಭ್ಯರ್ಥಿಯನ್ನು ನಿಲ್ಲುಸುತ್ತೇನೆ ಎಂದು ಹೇಳಿರುವುದಕ್ಕೆ ನಿದರ್ಶನವಾಗಿದೆ. ಜೆಡಿಎಸ್ ಮೈತ್ರಿ ವಿಶ್ವಾಸ ಗಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮೋದಿ ಮಾಯ: ಗೆದ್ದ ನಂತರ ಒಂದು ಸಲವು ಮತಕ್ಷೇತ್ರದಲ್ಲಿ ಬಾರದ ಅಭಿವೃದ್ಧಿಗೆ ಒತ್ತು ನೀಡದ ಜಾಧವ್ ಮೋದಿ ಅಲೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ಹಗಲು ಕನಸು ಕಾಣುತ್ತಿದ್ದಾರೆ. ಸಂಸದರ ನಿಧಿಯ ನಯಾ ಪೈಸೆಯೂ ಸದ್ಬಳಕೆ ಮಾಡದ ಇವರ ಜತೆಯಲ್ಲಿ ಪ್ರಚಾರ ಕಡೆ ಹೋದರೆ ನಮ್ಮ ಮರ್ಯಾದೆ ಇರುವುದಿಲ್ಲ. ಇದಕ್ಕಾಗಿ ಗುರುಮಠಕಲ್ ಕ್ಷೇತ್ರದಿಂದ ಗೋ ಬ್ಯಾಕ್ ಆಗಬೇಕು. ಪ್ರಚಾರಕ್ಕೆ ಬರಬೇಡಿ ಎಂದು ಬಿಜೆಪಿ ಕಾರ್ಯಕರ್ತರು ಜಾಧವ್‌ಗೆ ಹೇಳಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.