ತುಮಕೂರಿನಲ್ಲಿ ವೈಭವದ ಜಂಬೂ ಸವಾರಿಗೆ ತೆರೆ

| Published : Oct 13 2024, 01:07 AM IST

ತುಮಕೂರಿನಲ್ಲಿ ವೈಭವದ ಜಂಬೂ ಸವಾರಿಗೆ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಆಯೋಜಿಸಿದ್ದ ದಸರಾ ಮಹೋತ್ಸವಕ್ಕೆ ವಿಜಯದಶಮಿಯಂದು ವೈಭವದ ಜಂಬೂಸವಾರಿಗೆ ಸಹಸ್ರಾರು ಮಂದಿ ಸಾಕ್ಷಿಯಾದರು.

ಕನ್ನಡಪ್ರಭ ವಾರ್ತೆ ತುಮಕೂರುಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಆಯೋಜಿಸಿದ್ದ ದಸರಾ ಮಹೋತ್ಸವಕ್ಕೆ ವಿಜಯದಶಮಿಯಂದು ವೈಭವದ ಜಂಬೂಸವಾರಿಗೆ ಸಹಸ್ರಾರು ಮಂದಿ ಸಾಕ್ಷಿಯಾದರು.ನಗರದ ಟೌನ್‌ಹಾಲ್ ವೃತ್ತದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆ ಐವತ್ತು ನಿಮಿಷಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಲಕ್ಷ್ಮೀ ಆನೆ ಮೇಲೆ ಕೂರಿಸಲಾಗಿದ್ದ ನಾಡದೇವತೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ದಸರಾ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು.ಅಂಬಾರಿಯು ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿ, ಕೋತಿ ತೋಪು, ಡಾ. ಶಿವಕುಮಾರ ಸ್ವಾಮೀಜಿ ಸರ್ಕಲ್ ಮೂಲಕ ಜೂನಿಯರ್ ಕಾಲೇಜು ಮೈದಾನ ತಲುಪಿತು. ಮೆರವಣಿಗೆಯಲ್ಲಿ 70 ಕ್ಕೂ ಹೆಚ್ಚು ನಗರದ ದೇವತೆಗಳು, ಜಾನಪದ ಕಲಾ ಮೇಳಗಳು, ಕಲಾ ತಂಡಗಳು, ಹಳ್ಳಿಕಾರ್ ಎತ್ತುಗಳು ಭಾಗವಹಿಸಿದ್ದವು.

ಜೂನಿಯರ್ ಕಾಲೇಜು ಮೈದಾನದಲ್ಲಿ ಗೃಹ ಸಚಿವರು ಅಂಬನ್ನು ಕಡಿಯುವುದರ ಮೂಲಕ ಹತ್ತು ದಿವಸಗಳ ದಸರಾಕ್ಕೆ ಇತಿಶ್ರೀ ಹಾಡಿದರು. ಅಂಬಾರಿ ಮೆರವಣಿಗೆಯು ಯಾವುದೇ ಅಡೆತಡೆಯಿಲ್ಲದೆ ನಡೆಯಿತು. ಆನೆ ಲಕ್ಷ್ಮೀಯು ಗಾಂಭೀರ್ಯದಿಂದ ಹೆಜ್ಜೆ ಹಾಕಿತು. ಸುಮಾರು 2.5 ಕಿ.ಮೀ.ಗಳಿಗೂ ಹೆಚ್ಚು ದೂರ ಕ್ರಮಿಸಿತು. ರಸ್ತೆಯ ಇಕ್ಕೆಲಗಳಲ್ಲಿ ಜನರು ಅಂಬಾರಿಯನ್ನು ನೋಡಿ ಕಣ್ಣು ತುಂಬಿಕೊಂಡಿದ್ದರು.ಮೊದಲು ತುಮಕೂರು ದಸರಾ ಸಮಿತಿಯವರು ದಸರಾ ಆಚರಿಸುತ್ತಿದ್ದರು. ಆದರೆ ಈ ಬಾರಿ ಜಿಲ್ಲಾಡಳಿತವೇ ಆಚರಿಸುವುದರೊಂದಿಗೆ ಗಮನಸೆಳೆಯಿತು. ಕಳೆದ 2 ತಿಂಗಳಿನಿಂದ ಇದಕ್ಕಾಗಿ ನಿರಂತರ ಸಿದ್ಧತೆ ನಡೆದಿತ್ತು. ದಸರಾ ಅಂಗವಾಗಿ ವಿವಿಧ ಸಮಿತಿ ರಚಿಸಲಾಗಿತ್ತು.ಕಳೆದ 9 ದಿವಸಗಳಿಂದ ಪ್ರತಿ ದಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ತಾಯಿಗೆ ವಿವಿಧ ಪೂಜೆ, ಹೋಮಗಳು ನೆರವೇರಿದವು. ಆಯುಧಪೂಜೆಯ ದಿವಸದಂದು ನಟ ಶಿವರಾಜಕುಮಾರ್ ಆಗಮಿಸಿ ಜನರನ್ನು ರಂಜಿಸಿದರು. ಹಾಗೆಯೇ ಗುರುಕಿರಣ್ ಮತ್ತು ಕಂಬದ ರಂಗಯ್ಯ ಅವರ ಹಾಡುಗಾರಿಕೆ ಕೂಡ ಗಮನಸೆಳೆಯಿತು.ಕಳೆದ 9 ದಿವಗಳಿಂದ ತುಮಕೂರಿನ ಗುಬ್ಬಿ ವೀರಣ್ಣ ಹಾಗೂ ಜೂನಿಯರ್ ಕಾಲೇಜಿನ ಮುಖ್ಯ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಸುಮಾರು 40 ಕ್ಕೂ ಹೆಚ್ಚು ಅಪರೂಪದ ವಿಂಟೇಜ್ ಕಾರುಗಳ ರೋಡ್ ಶೋ ಕೂಡ ನೆರವೇರಿತು.ಮುಂದಿನ ವರ್ಷದಿಂದ ತುಮಕೂರು ದಸರಾವನ್ನು ಮತ್ತಷ್ಟು ರಚನಾತ್ಮಕವಾಗಿ ಮೈಸೂರು ದಸರಾ ಮಟ್ಟದಲ್ಲಿ ರೂಪಿಸಲು ತೀರ್ಮಾನಿಸಲಾಯಿತು. ಕಳೆದ ಒಂದು ವಾರದಿಂದ ಇಡೀ ತುಮಕೂರು ದಸರಾ ಮಯವಾಗಿತ್ತು. ಶನಿವಾರ ರಾತ್ರಿ ಹೆಸರಾಂತ ಗಾಯಕ ವಿಜಯಪ್ರಕಾಶ್ ಅವರ ಗಾಯನದೊಂದಿಗೆ ವೈಭವದ ದಸರಾಕ್ಕೆ ತೆರೆ ಬಿತ್ತು.ಕಣ್ಮನ ಸೆಳೆದ ದೀಪಾಲಂಕಾರ: ತುಮಕೂರು ದಸರಾದಲ್ಲಿ ಈ ಬಾರಿ ದೀಪಾಲಂಕಾರ ಗಮನಸೆಳೆಯಿತು. ಇಡೀ ನಗರಕ್ಕೆ ದೀಪಾಲಂಕಾರ ಮಾಡಲಾಗಿತ್ತು. ಪ್ರಮುಖ ರಸ್ತೆಗಳಲೆಲ್ಲಾ ಜನ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳಿಗೆ ದೀಪಾಲಂಕಾರ ಮಾಡಿದ್ದು ವಿಶೇಷವಾಗಿತ್ತು. ಹಾಗೆಯೇ ಜನರನ್ನು ಆಕರ್ಷಿಸಲು ಅಮಾನಿಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟಾರೆಯಾಗಿ ತುಮಕೂರು ದಸರಾ ಅತ್ಯಂತ ಯಶಸ್ವಿಯಾಯಿತು.