ಸಾರಾಂಶ
ಬೆಂಗಳೂರು ": ಮಂಡ್ಯದಲ್ಲಿ ಡಿ.20 ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಜನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ (ಗೊರುಚ) ಆಯ್ಕೆಯಾಗಿದ್ದಾರೆ.
ಬುಧವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಸಮ್ಮೇಳನಾಧ್ಯಕ್ಷರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗೊ.ರು.ಚನ್ನಬಸಪ್ಪ, ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರೀ, ಪ್ರೊ. ಹಂ.ಪ.ನಾಗರಾಜಯ್ಯ, ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಸುಧಾಮೂರ್ತಿ, ಡಾ.ಲತಾ ರಾಜಶೇಖರ್, ನಾ.ಮೊಗಸಾಲೆ ಸೇರಿದಂತೆ ಹಲವರ ಹೆಸರು ಚರ್ಚೆಗೆ ಬಂದಿತ್ತು. ಹಿರಿತನ ಹಾಗೂ ನೆಲ-ಜಲ-ಭಾಷೆ ಸೇರಿ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಎಲ್ಲವನ್ನೂ ಪರಿಗಣಿಸಿ 94 ವರ್ಷದ ಗೊ.ರು.ಚನ್ನಬಸಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
25 ಕೋಟಿ ರು. ಅನುದಾನ:
ಮಂಡ್ಯ ಕನ್ನಡ ಸಮ್ಮೇಳನಕ್ಕೆ 30 ಕೋಟಿ ರು. ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಈಗಾಗಲೇ 25 ಕೋಟಿ ರು. ಬಿಡುಗಡೆ ಮಾಡಿದೆ. ಮಂಡ್ಯ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ನೀಡಿದ್ದು, ಅದರಿಂದ 6 ಕೋಟಿ ರು. ಸಂಗ್ರಹವಾಗಿದೆ. ಸಮ್ಮೇಳನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಸೇರಿ ಜನಪ್ರತಿನಿಧಿಗಳು, ಅಧಿಕಾರಿ ಸಿಬ್ಬಂದಿ, ಕಸಾಪ ಪದಾಧಿಕಾರಿಗಳು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಪ್ರಕಟಣಾ ವಿಭಾಗದ ಸಂಚಾಲಕ ಶ್ರೀಧರ ಮೂರ್ತಿ ಇತರರು ಇದ್ದರು.
ಪರಭಾಷಿಕರಿಗೆ ಕನ್ನಡ ಕಲಿಸುವ ಕುರಿತು ಚರ್ಚೆಕರ್ನಾಟಕ ಸಾಹಿತ್ಯ ಪರಿಷತ್ತಿನಲ್ಲಿ ನಾನು ಕೆಲಸ ಮಾಡಿದ್ದೇನೆ. ಆ ಸಂಸ್ಥೆಯ ಮೇಲಿನ ಅಭಿಮಾನದಿಂದ, ಕನ್ನಡದ ಮೇಲಿನ ಗೌರವದಿಂದ ಸಂತೋಷದಿಂದ ಸಮ್ಮೇಳನಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ. ಕನ್ನಡದ ನೆಲ, ಜಲದ ಜೊತೆಗೆ ಕನ್ನಡೇತರರಿಗೆ ಕನ್ನಡ ಕಲಿಸುವ ವಿಚಾರದ ಬಗ್ಗೆ ಈ ವರ್ಷದ ಸಮ್ಮೇಳನದಲ್ಲಿ ಚರ್ಚಿಸುವ ಉದ್ದೇಶವಿದೆ.
- ಗೊ.ರು.ಚನ್ನಬಸಪ್ಪ ಹಿರಿಯ ಜನಪದ ವಿದ್ವಾಂಸ
ಕನ್ನಡದ ಜೀವ ಗೊರುಚ
- 1930ರಲ್ಲಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಜನಿಸಿದ ಗೊ.ರು.ಚನ್ನಬಸಪ್ಪ
- ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟ, ಬಳಿಕ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ
- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ
- 1992-1995ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 18ನೇ ಅಧ್ಯಕ್ಷರಾಗಿ ಸೇವೆ
- ಕೊಪ್ಪಳ, ಮಂಡ್ಯ ಮತ್ತು ಮುಧೋಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಹಿಂದಿನ ಶಕ್ತಿ
- ಜನಪದ ಸೇರಿದಂತೆ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ 50ಕ್ಕೂ ಅಧಿಕ ಕೃತಿ ರಚನೆ
ಗೊರುಚ ಬದುಕು-ಸಾಧನೆ
ಜನಪದ ಸಾಹಿತಿ, ಸಂಘಟಕರಾದ ಗೊ.ರು.ಚನ್ನಬಸಪ್ಪ ಅವರು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೊಂಡೇದಹಳ್ಳಿಯಲ್ಲಿ ರುದ್ರಪ್ಪಗೌಡ, ಅಕ್ಕಮ್ಮ ದಂಪತಿಯ ಪುತ್ರರಾಗಿ 1930 ಮೇ 19ರಂದು ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಇವರು 18ನೇ ವಯಸ್ಸಿನಲ್ಲೇ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಗೆ ಸೇರಿದರು.
ಗಾಂಧೀ ಗ್ರಾಮದಲ್ಲಿ ಸಮಾಜ ಶಿಕ್ಷಣವನ್ನು ಪಡೆದ ಗೊರುಚ ಅವರು ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲಿ ಕೆಲಸ ಮಾಡಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಹೆಡ್‍ಕ್ವಾರ್ಟರ್ಸ್ ಕಮೀಷನರ್ ಆಗಿ ದುಡಿದಿರುವ ಗೊರುಚ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. 1992-95ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 18ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ, ಮಂಡ್ಯ ಮತ್ತು ಮುಧೋಳದಲ್ಲಿ ನಡೆದ 62, 63 ಮತ್ತು 64ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿದ ಯಶಸ್ಸು ಅವರದ್ದು.
ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ಹೊನ್ನ ಬಿತ್ತೇವು ನೆಲಕೆಲ್ಲ, ವಿಭೂತಿ, ಕರ್ನಾಟಕ ಜನಪದ ಕಲೆಗಳು ಹೀಗೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಗೊ.ರು.ಚನ್ನಬಸಪ್ಪನವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಗೊರುಚ ಅವರ ಮುಡಿಗೇರಿವೆ.
30 ವರ್ಷದ ನಂತರ ಸಮ್ಮೇಳನಾಧ್ಯಕ್ಷ
1992ರಿಂದ 95ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 18ನೇ ಅಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ. ಅವರು ತಮ್ಮ ಅವಧಿಯಲ್ಲಿ ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ಎಂದು ಘೋಷಣೆ ಮಾಡಿ ಪರಿಷತ್ತಿಗೆ ಆರ್ಥಿಕ ಬಲ ತುಂಬಿದ್ದರು. 1994ರಲ್ಲಿ ಮಂಡ್ಯದಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಚದುರಂಗರು ಸಮ್ಮೇಳನಾಧ್ಯಕ್ಷರಾಗಿದ್ದರು. ಆಗ ಕಸಾಪ ಅಧ್ಯಕ್ಷರಾಗಿ ಗೊರುಚ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದರು. ಈಗ ಮೂವತ್ತು ವರ್ಷಗಳ ನಂತರ ಅದೇ ಮಂಡ್ಯ ಜಿಲ್ಲೆಯಲ್ಲಿ ಆಯೋಜನೆಗೊಳ್ಳುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
;Resize=(690,390))
;Resize=(128,128))
;Resize=(128,128))
;Resize=(128,128))