ಸಾರಾಂಶ
ಕಡೂರು, ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿದ್ದಲ್ಲಿ ಅಂದುಕೊಂಡಿರುವ ಗುರಿ ಮುಟ್ಟಲು ಸಾಧ್ಯ ಎಂದು ಗ್ರಾಮೀಣ ಪ್ರತಿಭೆ ವೈ.ಎಸ್. ಕಾವ್ಯ ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ವೈ ಎಸ್ ವಿ ದತ್ತ ಹೇಳಿದರು
ಐಎಫ್ಎಸ್ ಪರೀಕ್ಷೆಯಲ್ಲಿ ದೇಶಕ್ಕೆ 7ನೇ ರಾಂಕ್ ಪಡೆದ ಕಾವ್ಯಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ, ಕಡೂರುಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿದ್ದಲ್ಲಿ ಅಂದುಕೊಂಡಿರುವ ಗುರಿ ಮುಟ್ಟಲು ಸಾಧ್ಯ ಎಂದು ಗ್ರಾಮೀಣ ಪ್ರತಿಭೆ ವೈ.ಎಸ್. ಕಾವ್ಯ ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ವೈ ಎಸ್ ವಿ ದತ್ತ ಹೇಳಿದರು.
ಕಡೂರು ತಾಲೂಕಿನ ವಿ ಯರದಕೆರೆ ಗ್ರಾಮದ ರೈತ ಕುಟುಂಬದ ಸೋಮಶೇಖರಪ್ಪ ಮತ್ತು ರತ್ನಮ್ಮ ಪುತ್ರಿ ವೈ.ಎಸ್. ಕಾವ್ಯರವರು ಐಎಫ್ ಎಸ್ ಪರೀಕ್ಷೆಯಲ್ಲಿ ದೇಶಕ್ಕೆ 7ನೇ ರಾಂಕ್ ಪಡೆದಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿ ಮಾತನಾಡಿದರು.ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ಗ್ರಾಮೀಣ ಪ್ರತಿಭೆಗಳು ಕೂಡ ನಗರ ಪಟ್ಟಣಗಳ ಮಕ್ಕಳೊಂದಿಗೆ ಪೈಪೋಟಿ ನಡೆಸುವ ಮೂಲಕ ಇಂದು ಉನ್ನತ ಪರೀಕ್ಷೆಗಳಲ್ಲಿ ತೇರ್ಗಡೆ ಆಗಿ ಸಾಧನೆ ಮಾಡುತ್ತಿರುವುದು ಅಭಿನಂದನಾರ್ಹ ಮತ್ತು ಸಂತೋಷದ ಸಂಗತಿ ಎಂದರು. ಪ್ರತಿಭೆಗಳಿಗೆ ತಕ್ಕ ಬೆಂಬಲ ಮತ್ತು ಪುರಸ್ಕಾರ ಸಿಕ್ಕಲ್ಲಿ ಅಂತಹ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಬೆಳಗಲು ಸಾಧ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಆಗುವ ಮೂಲಕ ಗ್ರಾಮೀಣ ಮಕ್ಕಳು ಕೂಡ ತಮ್ಮ ಗುರಿ ಸಾಧನೆ ಮೂಲಕ ತಾವು ಇಷ್ಟಪಟ್ಟಿರುವ ಪದವಿಗಳ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಇದು ದೇಶದ ಶಿಕ್ಷಣ ಮಟ್ಟ ವನ್ನು ಸುಧಾರಿಸುತ್ತಿರುವ ಒಂದು ಬೆಳವಣಿಗೆ ಆಗಿದೆ ಎಂದರು. ನಮ್ಮ ಗ್ರಾಮೀಣ ಪ್ರದೇಶದ ಸಾಮಾನ್ಯ ರೈತ ಕುಟುಂಬದ ಕಾವ್ಯ ಅವರು ಶ್ರದ್ಧೆ ಮತ್ತು ಆಸಕ್ತಿಯಿಂದ ಅಭ್ಯಾಸ ಮಾಡಿ ಉನ್ನತ ಪರೀಕ್ಷೆ ಎದುರಿಸಿ ತಾಲೂಕು ಜಿಲ್ಲೆ ಮತ್ತು ರಾಜ್ಯಕ್ಕೆ ಗೌರವ ತಂದಿರುವುದು ಕಡೂರು ತಾಲೂಕಿಗೆ ಹೆಮ್ಮೆಯ ಗರಿ ಬಂದಂತಾಗಿದೆ. ಅವರ ಈ ಸಾಧನೆ ಬೇರೆಯವರಿಗೆ ಮಾದರಿ ಯಾಗಲಿ ಎಂದು ಆಶಿಸಿದರು.ಇದೇ ಸಂದರ್ಭದಲ್ಲಿ ಕಾವ್ಯ ರವರ ಪೋಷಕರು, ಪಿ.ಸಿ. ಗಂಗಾಧರ್, ಗಿರೀಶ್, ಹರೀಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
27ಕೆಕೆಡಿಯು3. ಐ.ಎಫ್ ಎಸ್ ಪರೀಕ್ಷೆಯಲ್ಲಿ 7ನೇ ರಾಂಕ್ ಗಳಿಸಿ ತೇರ್ಗಡೆಯಾದ ಕಡೂರು ತಾಲೂಕಿನ ವಿ.ಯರದಕೆರೆ ಗ್ರಾಮದ ವೈ. ಎಸ್. ಕಾವ್ಯ ಅವರನ್ನು ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಭಿನಂದಿಸಿದರು.