ಶಿಕ್ಷಕರು, ನಿರುದ್ಯೋಗಿ ಪದವೀಧರರು, ನ್ಯಾಯವಾದಿಗಳು ಹಾಗೂ ಅನ್ಯಾಯಕ್ಕೊಳಗಾದ ಶೋಷಿತರ ಧ್ವನಿಯಾಗಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಹೇಳಿದರು.

ಮುಂಡರಗಿ: ನಾನು ಅಧಿಕಾರದ ಲಾಲಸೆಯಿಂದ ಚುನಾವಣೆಗೆ ನಿಂತಿಲ್ಲ. ಬದಲಾಗಿ ಶಿಕ್ಷಕರು, ನಿರುದ್ಯೋಗಿ ಪದವೀಧರರು, ನ್ಯಾಯವಾದಿಗಳು ಹಾಗೂ ಅನ್ಯಾಯಕ್ಕೊಳಗಾದ ಶೋಷಿತರ ಧ್ವನಿಯಾಗಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಕ್ಟೋಬರ್ ಕೊನೆಯ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಗದಗ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಒಟ್ಟು 24 ವಿಧಾನಸಭಾ ಕ್ಷೇತ್ರಗಳು ಹಾಗೂ 34 ತಾಲೂಕುಗಳಿವೆ. ಈ ಪೈಕಿ 17 ಕಾಂಗ್ರೆಸ್ ಶಾಸಕರಿದ್ದು, ಬಿಜೆಪಿಯ 7 ಶಾಸಕರ ಪೈಕಿ ಯಲ್ಲಾಪುರದ ಶಾಸಕರು ಈಗಾಗಲೇ ಕಾಂಗ್ರೆಸ್‌ಗೆ ಬೇಷರತ್ತಾಗಿ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಬಲ 18ಕ್ಕೆ ಏರಿಕೆಯಾಗಿದೆ. 2008ರ ಮುನ್ನ 24 ವರ್ಷಗಳ ಕಾಲ ಈ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ನಂತರದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಾ ಬಂದಿದ್ದು, ಪಕ್ಷದ ನಾಯಕರು, ಎಲ್ಲ ಶಾಸಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದರಿಂದ ಈ ಬಾರಿ ಮತ್ತೆ ಕಾಂಗ್ರೆಸ್ ಜಯಭೇರಿ ಬಾರಿಸುವುದು ನಿಶ್ಚಿತ ಎಂದರು.

ತಾಲೂಕು ಅಥವಾ ಹೋಬಳಿ ಕೇಂದ್ರಗಳಲ್ಲಿ ಮತಗಟ್ಟೆಗಳಿರುತ್ತವೆ. ಆದ್ದರಿಂದ ಪ್ರಜ್ಞಾವಂತ ಪದವೀಧರ ಮತದಾರರು ತಮ್ಮ ಗುರುತಿನ ಚೀಟಿಯೊಂದಿಗೆ ಕೇಂದ್ರಗಳಿಗೆ ಬಂದು ತಪ್ಪದೇ ಹಕ್ಕು ಚಲಾಯಿಸಬೇಕು. ಡಿಸೆಂಬರ್ 30, 2025ರ ಪಟ್ಟಿಯ ಪ್ರಕಾರ ಕ್ಷೇತ್ರದಲ್ಲಿ 88,087 ಮತದಾರರಿದ್ದಾರೆ. ಜನವರಿ 19, 2026ರಂದು ಆಯೋಗ ಹೊರಡಿಸಿದ ಸುತ್ತೋಲೆಯಂತೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶವಿದ್ದು, ಇನ್ನೂ ಹೆಸರು ನೋಂದಾಯಿಸದ ಪದವೀಧರರು ತಕ್ಷಣವೇ ನಿಗದಿತ ಫಾರಂ-18, ಎರಡು ಭಾವಚಿತ್ರ, ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪದವಿ ಪ್ರಮಾಣಪತ್ರದ ದ್ವಿಪ್ರತಿ ಜೆರಾಕ್ಸ್ ನೀಡಿ ಮತದಾರರಾಗಿ ನೋಂದಾಯಿಸಿಕೊಳ್ಳಬೇಕು ಎಂದು ಮೋಹನ್ ಲಿಂಬಿಕಾಯಿ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ, ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್‌ಗೌಡ ಪಾಟೀಲ, ಹೇಮಂತಗೌಡ ಪಾಟೀಲ, ಆದಪ್ಪಗೌಡ, ಪ್ರಧಾನ ಕಾರ್ಯದರ್ಶಿ ಶೇಖರ್ ಜುಟ್ಲಣ್ಣವರ, ದಾನೇಶ್ವರಿ ಭಜಂತ್ರಿ, ನಾಗರಾಜ ಹೊಂಬಳಗಟ್ಟಿ, ಡಾ. ಬಿ.ಎಸ್. ಮೇಟಿ ಉಪಸ್ಥಿತರಿದ್ದರು.