ತ್ಯಾಗದಿಂದ ಭಗವಂತನನ್ನು ಕಾಣಬಹುದು: ಕನ್ಯಾಡಿ ಶ್ರೀ

| Published : Apr 15 2025, 12:45 AM IST

ಸಾರಾಂಶ

ಶನಿವಾರ ಅಳದಂಗಡಿ ಶ್ರಿ ಸತ್ಯದೇವತಾ ಮೈದಾನದಲ್ಲಿ ಸಂಸ್ಕಾರ ಭಾರತಿ ದ.ಕ. ಮತ್ತು ಬೆಳ್ತಂಗಡಿ ತಾಲೂಕು, ಹನುಮೋತ್ಸವ ಸಮಿತಿ ಅಳದಂಗಡಿ ಇದರ ಸಾರಥ್ಯದಲ್ಲಿ ಹನುಮೋತ್ಸವ ನೆರವೇರಿತು.

ಕ್ನನಡಪ್ರಭ ವಾರ್ತೆ ಬೆಳ್ತಂಗಡಿತ್ಯಾಗದಿಂದ ಭಗವಂತನನ್ನು ಕಾಣಬಹುದು. ಪ್ರತಿಯೊಬ್ಬರದು ಸಂಸ್ಕಾರಯುತ ಬದುಕಾಗಬೇಕು. ದೇಶದಲ್ಲಿ ರಾಷ್ಟ್ರೀಯತೆ ಬೆಳೆಯುವ ಅಗತ್ಯವಿದ್ದು, ಅದಕ್ಕಾಗಿ ಮಕ್ಕಳಿಗೆ ಬಾಲ್ಯದಲ್ಲೇ ರಾಷ್ಟ್ರೀಯ ಮನೋಭಾವ ಬೆಳೆಸಬೇಕು ಎಂದು ಧರ್ಮಸ್ಥಳ ಕನ್ಯಾಡಿ ಶ್ರಿರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರಿ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಅಳದಂಗಡಿ ಶ್ರಿ ಸತ್ಯದೇವತಾ ಮೈದಾನದಲ್ಲಿ ಸಂಸ್ಕಾರ ಭಾರತಿ ದ.ಕ. ಮತ್ತು ಬೆಳ್ತಂಗಡಿ ತಾಲೂಕು, ಹನುಮೋತ್ಸವ ಸಮಿತಿ ಅಳದಂಗಡಿ ಇದರ ಸಾರಥ್ಯದಲ್ಲಿ ನಡೆದ ಹನುಮೋತ್ಸವದಲ್ಲಿ ಆಶೀರ್ವದಿಸಿದರು.ಸಮಿತಿ ವತಿಯಿಂದ ಮಹಾಭಿವಂದ್ಯವನ್ನು ಸ್ವೀಕರಿಸಿದ ಶ್ರೀಗಳು, ಉತ್ತಮ ಕಾರ್ಯ ಮಾಡುವುದೇ ಧರ್ಮ. ರಾಷ್ಟ್ರ ರಾಮರಾಜ್ಯವಾಗಬೇಕಿದ್ದು, ಇದಕ್ಕಾಗಿ ಸನಾತನ ಧರ್ಮಕ್ಕೆ ಇನ್ನಷ್ಡು ಶಕ್ತಿ ತುಂಬುವ ಕಾರ್ಯನಡೆಯಬೇಕು ಎಂದರು.ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅಭಿನಂದನಾ ಮಾತುಗಳನ್ನಾಡಿ, ದೇಶದ ಆತ್ಮ ರಾಮ, ದೇಶದ ನಂಬಿಕೆ ರಾಮ, ರಾಮನಿಗಿಂತ ಶ್ರೇಷ್ಠ ಜಗತ್ತಿನಲ್ಲಿ ಯಾರು ಇಲ್ಲ. ಅಂತಹ ರಾಮ ಆದರ್ಶಗಳನ್ನು ಪಾಲಿಸುತ್ತಿರುವ ಕನ್ಯಾಡಿ ಶ್ರೀಗಳು ಧರ್ಮ ಕಾರ್ಯಗಳನ್ನು ದೇಶಾದ್ಯಂತ ಮಾಡುತ್ತಿದ್ದು, ಇವರು ವಿದ್ಯಾವಂತರಾಗಿ ನಿರಂತರ ಅಧ್ಯಯನಶೀಲರಾಗಿದ್ದಾರೆ. ಇವರ ಧರ್ಮಕಾರ್ಯದಿಂದ ಮಹಾಮಂಡಲೇಶ್ವರರಾಗಿ ಗೌರವ ಸ್ಥಾನ ಸಿಕ್ಕಿದ್ದು ಇದು ದಕ್ಷಿಣ ಭಾರತಕ್ಕೆ ಹೆಮ್ಮೆ ಎಂದು ಹೇಳಿದರು.ಅಳದಂಗಡಿ ಅರಮನೆಯ ಅರಸ ಡಾ.ಪದ್ಮಪ್ರಸಾದ್ ಅಜಿಲ, ಶಾಸಕ ಹರೀಶ್ ಪೂಂಜ ಶುಭಹಾರೈಸಿದರು. ಹನುಮೋತ್ಸವ ಸಮಿತಿ ಅಧ್ಯಕ್ಷ ಸಂಪತ್ ಬಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ಉದ್ಯಮಿ ಕಿರಣ್ ಪುಷ್ಪಗಿರಿ, ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಗತಿ ಪರ ಕೃಷಿಕ ಗಂಗಾಧರ ಮಿತ್ತಮಾರ್, ಯೋಗೀಶ್ ಕಡ್ತಿಲ, ಡಾ.ಎಂ.ಎನ್. ತುಳಪುಳೆ, ಡಾ.ಶಶಿಧರ ಡೋಂಗ್ರೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಆಡಳಿದ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ ಉಪಸ್ಥಿತರಿದ್ದರು.ವಿವಿಧ ಭಜನಾ ತಂಡದಿಂದ ಕುಣಿತ ಭಜನೆ, ಹನುಮ ಸಹಸ್ರ ಕದಳಿಯಾಗ, ಸಾಮೂಹಿಕ ಹನುಮಾನ್ ಚಾಲಿಸ ಪಠಣ, ಹನುಮ ಶ್ರೀರಕ್ಷೆ ವಿತರಣೆ, ಲಂಕಾದಹನ, ಕನ್ಯಾಡಿ ಶ್ರೀಗಳಿಗೆ ಮಹಾಭೀವಂದ್ಯ ಕಾರ್ಯಕ್ರಮ ನಡೆಯಿತು. ಸಂಪತ್ ಬಿ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.